Kannada NewsKarnataka NewsLatest

ಸೇನೆ, 3 ಹೆಲಿಕಾಪ್ಟರ್ ನಿಯೋಜನೆ; 1.45 ಲಕ್ಷ ಜನರ ಸ್ಥಳಾಂತರ

 ಸೇನೆ, 3 ಹೆಲಿಕಾಪ್ಟರ್ ನಿಯೋಜನೆ; 1.45 ಲಕ್ಷ ಜನರ ಸ್ಥಳಾಂತರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

 ನೆರೆಯ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂದಿನ(ಆಗಸ್ಟ್ 9)ವರೆಗೆ ಒಟ್ಟು 323 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದುವರೆಗೆ  28,103 ಕುಟುಂಬಗಳನ್ನು ಸ್ಥಳಾಂತರಿಸಿ, ಪರಿಹಾರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
323 ಗ್ರಾಮಗಳು ಹಾಗೂ ಕೆಲವು ಪಟ್ಟಣ ಪ್ರದೇಶಗಳೂ ಸೇರಿದಂತೆ ಒಟ್ಟಾರೆ 1,45,368 ಜನರನ್ನು ಸ್ಥಳಾಂತರಿಲಾಗಿದೆ.
ಅದೇ ರೀತಿ ಪ್ರವಾಹಕ್ಕೆ ಸಿಲುಕಿದ 43,972 ಜಾನುವಾರುಗಳನ್ನು ಕೂಡ ಸ್ಥಳಾಂತರಿಸುವುದರ ಜತೆಗೆ ಸೂಕ್ತ ರಕ್ಷಣೆ ಮತ್ತು ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ.

327 ಪರಿಹಾರ ಕೇಂದ್ರ ಸ್ಥಾಪನೆ:

‌ಜಿಲ್ಲೆಯ ಎಲ್ಲ ಹದಿನಾಲ್ಕು ತಾಲ್ಲೂಕುಗಳಲ್ಲಿ ಇದುವರೆಗೆ 327 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಊಟೋಪಹಾರ, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಈ ಪರಿಹಾರ ಕೇಂದ್ರಗಳಲ್ಲಿ ಮಕ್ಕಳು ಸೇರಿದಂತೆ 82,425 ಜನರು ಆಶ್ರಯ ಪಡೆದುಕೊಂಡಿದ್ದಾರೆ.
ಅದೇ ರೀತಿ ರಕ್ಷಿಸಲಾದ ಹಾಗೂ ಸ್ಥಳಾಂತರಿಸಲಾದ ಜಾನುವಾರುಗಳ ಪೈಕಿ 26,750 ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ.
ಪ್ರವಾಹದಿಂದ ರಕ್ಷಿಸಲಾಗಿರುವ ತಾಲ್ಲೂಕಿನ ಕಬಲಾಪುರ ಗ್ರಾಮದ ಕಲ್ಲಪ್ಪ-ರತ್ನವ್ವ ದಂಪತಿಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಕಳಸದ ಉಪಸ್ಥಿತರಿದ್ದರು.

ಚಿಕ್ಕೋಡಿಯಲ್ಲಿ ಹೆಚ್ಚು ಸ್ಥಳಾಂತರ:

ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 6953 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಥಣಿ-4351, ರಾಯಬಾಗ-4349, ಖಾನಾಪುರ-236, ಹುಕ್ಕೇರಿ-975, ಗೋಕಾಕ-1082, ಕಾಗವಾಡ-4599, ನಿಪ್ಪಾಣಿ-2973, ಮೂಡಲಗಿ-1100, ಬೆಳಗಾವಿ-546, ಬೈಲಹೊಂಗಲ-38, ರಾಮದುರ್ಗ-628, ಸವದತ್ತಿ-631 ಹಾಗೂ ಕಿತ್ತೂರು-27 ಕುಟುಂಬಗಳನ್ನು ಆಗಸ್ಟ್ 9ರವರೆಗೆ ಸ್ಥಳಾಂತರಿಸಲಾಗಿದೆ.

3 ಹೆಲಿಕಾಪ್ಟರ್ ನಿಯೋಜನೆ:

ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸೇನೆಯ ಮೂರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ.
ಹೆಲಿಕಾಪ್ಟರ್ ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ನೌಕಾ ಮತ್ತು ವಾಯುಸೇನೆಯ ಯೋಧರು ಆಗಸ್ಟ್  8 ರಂದು ಒಟ್ಟು 32 ಜನರನ್ನು ರಕ್ಷಿಸಿದ್ದಾರೆ.
ಹಡಗಿನಾಳ-7, ಸುನ್ನಾಳ-18, ಬಾಗಲಕೋಟೆ ಜಿಲ್ಲೆಯ ಮುಧೋಳ-1 ಹಾಗೂ ರೂಗಿ-6 ಜನರನ್ನು ರಕ್ಷಿಸಿದ್ದು, ಕಾರ್ಯಾಚರಣೆ ಇಂದೂ ಮುಂದುವರಿದಿದೆ.
ಇಂದು ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಮತ್ತು ಬಾಗಲಕೋಟೆಯ ಮುಧೋಳ ತಾಲ್ಲೂಕಿನ ರೂಗಿಯಲ್ಲಿ ರಕ್ಷಣಾ ಕಾರ್ಯ ನಡೆಸಿದೆ.

ಆಹಾರ ಪೊಟ್ಟಣ ವಿತರಣೆ:

ಪ್ರವಾಹದಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಕೆಲ ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸದಲಗಾ, ಇಂಗಳಿ, ಚಂದೂರ ಟೇಕ್, ಯಡೂರವಾಡಿ ಮತ್ತಿತರ ಕಡೆಗಳಲ್ಲಿ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲ್ ಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಪೂರೈಸಲಾಗುತ್ತಿದೆ.
ಇದಲ್ಲದೇ ಬೆಳಗಾವಿ ನಗರದಲ್ಲಿಯೂ ಪರಿಹಾರಕೇಂದ್ರಗಳನ್ನು ಸ್ಥಾಪಿಸಿ, ಮಹಾನಗರ ಪಾಲಿಕೆಯ ವತಿಯಿಂದ ನಿರ್ವಹಿಸಲಾಗುತ್ತಿದೆ.
ಸೇನೆ, ಪೊಲೀಸ್, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್, ಗೃರಕ್ಷಕದಳ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಜನರು ಆತಂಕಕ್ಕೆ ಒಳಗಾಗದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಕೇಂದ್ರಗಳು ಅಥವಾ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹಪೀಡಿತ ಸಂತ್ರಸ್ತರಿಗಾಗಿ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ಉಚಿತವಾಗಿ ನಂದಿನಿ ಹಾಲು ಹಾಗೂ ಜಾನುವಾರುಗಳಿಗೆ ನಂದಿನಿ ಪಶು ಆಹಾರವನ್ನು ಒದಗಿಸಲು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಕಲ್ಲಪ್ಪ- ರತ್ನವ್ವ ದಂಪತಿ ಭೇಟಿ  

 ಪ್ರವಾಹದಿಂದ ರಕ್ಷಿಸಲಾಗಿರುವ ತಾಲ್ಲೂಕಿನ ಕಬಲಾಪುರ ಗ್ರಾಮದ ಕಲ್ಲಪ್ಪ-ರತ್ನವ್ವ ದಂಪತಿಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ ರತ್ನವ್ವ, “ಜೀವರಕ್ಷಣೆಗಾಗಿ ಮನೆಯ ಮೇಲೆ ಕುಳಿತುಕೊಂಡಿದ್ವಿ. ಮನೆಯೂ ನೀರಿನಲ್ಲಿ ಕೊಚ್ಚಿ ಹೋದಾಗ ಇಬ್ಬರೂ ಕೆಳಕ್ಕೆ ಬಿದ್ದಾಗ ನನ್ನ ಸ್ಥಿತಿ ಕಂಡು ಗಂಡ ಅಳತೊಡಗಿದರು. ಆದಾಗ್ಯೂ ಸಾವರಿಸಿಕೊಂಡು ಪಕ್ಕದಲ್ಲೇ ಇದ್ದ ಮಾವಿನ ಮರವನ್ನು ಏರಿದzವು” ಎಂದು ತಿಳಿಸಿದರು.
ಮೂರು ದಿನಗಳ ಕಾಲ ಉಪವಾಸವಿದ್ದು, ತಮ್ಮನ್ನು ರಕ್ಷಿಸುವಂತೆ ಬುಧವಾರ ರಾತ್ರಿ ಬಾಯಿಯಿಂದ ಸೀಟಿ ಹೊಡೀತಾ ಇದ್ವಿ.
ಇಬ್ಬರು ಮಕ್ಕಳಿದ್ದಾರೆ. ಮಗಳ ಮದುವೆಯಾಗಿದ್ಧು, ಹುಡುಗ ಅಜ್ಜಿಯ ಮನೆಯಲ್ಲಿದ್ದಾನೆ ಎಂದು ರತ್ನವ್ವ ತಿಳಿಸಿದರು.
ಈಜು ಬರುತ್ತಿದ್ದರೂ ಪತ್ನಿಯ ಜತೆಯೇ ಮರವೇರಿ ಕುಳಿತ ಪೊಲಿಯೋ ಪೀಡಿತ ಕಲ್ಲಪ್ಪ ಹಾಗೂ ರತ್ನವ್ವ ಅವರ ಧೈರ್ಯವನ್ನು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಡಾ.ರಾಜೇಂದ್ರ ಕೆ.ವಿ. ಮೆಚ್ಚುಗೆ ವ್ಯಕ್ತಪಡಿಸಿದರು.
ದಂಪತಿಯ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು,  ಯಾವುದೇ ರೀತಿಯ ಸಮಸ್ಯೆ ಇಲ್ಲ; ಚಳಿಯಿಂದ ರಕ್ಷಣೆ ನೀಡಲು ವಾರ್ಮರ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ನಿರ್ದೇಶಕ ಡಾ.ಎಸ್.ಟಿ.ಕಳಸದ ತಿಳಿಸಿದರು.
ದಂಪತಿ ಸಂಪೂರ್ಣ ಗುಣಮುಖರಾಗುವರೆಗೆ ಎಲ್ಲ ಅಗತ್ಯ ಚಿಕಿತ್ಸೆ ಮತ್ತು ಸೌಲಭ್ಯವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಕಳಸದ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button