*ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ ಸಚಿವ ರಹೀಂ ಖಾನ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಅವಧಿ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಹೇಳಿದರು.
ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯರಾದ ಪ್ರತಾಪ್ ಸಿಂಹ ನಾಯಕ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ 187 ನಗರ ಸ್ಥಳೀಯ ಸಂಸ್ಥೆ (ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ) ಗಳ ಐದು ವರ್ಷಗಳ ಕೌನ್ಸಿಲ್ ಅಧಿಕಾರವಧಿ ಮುಕ್ತಾಯಗೊಂಡಿರುತ್ತದೆ.
ಆದ್ದರಿಂದ ಸರ್ಕಾರದ ಅಧಿಸೂಚನೆ ಸಂ: 287 ಎಂಎಲ್‍ಆರ್ 2025 ದಿನಾಂಕ 06.11.2025, 19.11.2025 ಹಾಗೂ 05.12.2025ರಲ್ಲಿ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 389 ರಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಅವಧಿ ಮುಕ್ತಾಯಗೊಂಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಅವುಗಳ ದಿನನಿತ್ಯದ ಕಾರ್ಯನಿರ್ವಹಣೆಗಾಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿರುತ್ತದೆ. ಈ ಮೂಲಕ ನಗರಸಭೆ, ಪುರಸಭೆ ಹಾಗು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಕ್ರಮವಹಿಸಲಾಗಿರುತ್ತದೆ.
ಆಡಳಿತಾಧಿಕಾರಿಗಳ ನೇಮಕ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಉಳ್ಳಾಲ, ಪುತ್ತೂರ, ಬಂಟ್ವಾಳ, ಮೂಡುಬಿದರೆ, ಬೆಳ್ತಂಗಡಿ, ಸುಳ್ಯ ಮತ್ತು ಮುಲ್ಕಿ ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.



