*ಮೀಸಲಾತಿ ಹೋರಾಟ: ಮೇ.23 ರಂದು ರಾಜ್ಯಮಟ್ಟದ ಸಂಕಲ್ಪ ಸಭೆ: ಬಸವ ಜಯಮೃತ್ಯುಂಜಯ ಶ್ರೀ*
ಪ್ರಗತಿವಾಹಿನಿ ಸುದ್ದಿ: ಪಂಚಮಸಾಲಿ ಮೀಸಲಾತಿ ವಿಳಂಬ ಆಗಿರುವ ಕಾರಣ, ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ದ ಪಡಿಸಲು ಮೇ.23 ರಂದು ಉಳುವಿಯ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಂಕಲ್ಪ ಸಭೆ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಂಗಳವಾರ ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಲ್ಪ ಸಭೆ ಮುಗಿದ ಬಳಿಕ ಮೇ.24ರಂದು ಉಳುವಿಯ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ ಸಮಾಜದವರು ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಸಲಾಗುವುದು. ಕಳೆದ ಮೂರು ವರ್ಷದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಲುವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಸರಕಾರದ ಬಗ್ಗೆ ಮೃದು ಧೋರಣೆ ಇಲ್ಲ. ಹೋರಾಟ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಕಳೆದ ಐದು ವರ್ಷಗಳ ಹಿಂದೆ ಬಿಜೆಪಿಯ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೂ ಒತ್ತಾಯ ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರಿಗೂ ಒತ್ತಾಯ ಮಾಡಿದ್ದೆವು. ಈಗಿರುವ ಕಾಂಗ್ರೆಸ್ ಸರಕಾರದ ಪಂಚಮಸಾಲಿ ಸಮಾಜದ ಸಚಿವರು ರಾಜೀನಾಮೆ ಕೊಟ್ಟರೆ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಸಮಾಜದವರು ಹೋರಾಟ ಮಾಡಿಕೊಂಡು ಮೀಸಲಾತಿ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್.ಕೆ.ಪಾಟೀಲ್, ಗುಂಡು ಪಾಟೀಲ್, ಶಿವಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ