Latest

ಅಪರೂಪದ ರಿಡ್ಲೆ ಕಡಲಾಮೆ ಮೊಟ್ಟೆ ಇಡುವ ದೃಶ್ಯ (ವೀಡಿಯೋ ನೋಡಿ)

 

ಪ್ರಗತಿವಾಹಿನಿ ಸುದ್ದಿ; ಕಾಸರಕೋಡ: ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ನಿನ್ನೆ ತಡ ರಾತ್ರಿ ರಿಡ್ಲೆ ಜಾತಿಯ ಕಡಲಾಮೆಯೊಂದು 250ಕ್ಕೂ ಹೆಚ್ಚು ಮೊಟ್ಟೆ ಇಟ್ಟು ಮರಳಿನಲ್ಲಿ ಸಂರಕ್ಷಣೆ ಮಾಡುತ್ತಿರುವ ಅಪರೂಪದ ದೃಶ್ಯವನ್ನು ಮೀನುಗಾರರು ಸೆರೆಹಿಡಿದಿದ್ದಾರೆ.

ಇತ್ತೀಚೆಗೆ ಚೆನ್ಯೈನ ಎನ್ ಸಿ ಎಸ್ ಸಿಎಮ್ ಎಂಬ ಕರಾವಳಿ ಸಂಶೋಧನಾ ಸಂಸ್ಥೆಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ( ರಿಟ್ ಸಂಖ್ಯೆ 4039 /2021ರಲ್ಲಿ) ದಾವೆಯಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದಲ್ಲಿ ಕಡಲಾಮೆಗಳು ಬಂದು ಹೋಗಿರುವ, ಮೊಟ್ಟೆ ಇಡುವ ಬಗೆಗಿನ ಕುರುಹು ಅಥವಾ ಅದರ ಅವಶೇಷಗಳ ಕುರುಹುಗಳು ಕಂಡು ಬಂದಿಲ್ಲವೆಂದು ತಾವು ನಡೆಸಿದ ಸಮೀಕ್ಷೆಯನ್ನು ಉಲ್ಲೇಖಿಸಿ ಬಂದರು ನಿರ್ಮಾಣ ಕಂಪನಿಗೆ ಅನುಕೂಲಕರವಾಗುವಂತೆ ಉಚ್ಛ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು ಎಂಬ ಆಪಾದನೆ ಕೇಳಿ ಬಂದಿತ್ತು.

ಇತ್ತೀಚೆಗೆ ವಾಣಿಜ್ಯ ಬಂದರು ಯೋಜನಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ ಕಾರ್ಯ ಆರಂಬಿಸುವ ಸಂದರ್ಭದಲ್ಲಿ ಇಲ್ಲಿನ ಕಡಲತೀರದಲ್ಲಿ ಮಣ್ಣು ಸುರಿಯಬೇಡಿ ಈ ಪ್ರದೇಶದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತವೆ ಎಂದು ಸಹಾಯಕ ಆಯುಕ್ತರ ಗಮನ ಸೆಳೆದು ಕಡಲತೀರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸದಂತೆ ಸ್ಥಳೀಯ ಮೀನುಗಾರರು ತಡೆ ಒಡ್ಡಿದ್ದರು.ಆದರೆ ಅಂದು ಕಾಮಗಾರಿಯನ್ನು ವಿರೋಧಿಸಿದ ಮೀನುಗಾರರ ಧುರೀಣರನ್ನು ಜಿಲ್ಲಾ ಆಡಳಿತವು ಪೋಲೀಸ್ ಬಲಬಳಸಿ ಏಕಾಏಕಿ ಬಂಧಿಸಿ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿ ಸಿ ಆರ್ ಜೆಡ್. ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಬಲವಂತದಿಂದ ಕಡಲತೀರದಲ್ಲಿ ಮಣ್ಣು ಸುರಿದು ರಸ್ತೆ ಕಾಮಗಾರಿ ನಡೆಸಿತ್ತು ಎನ್ನುವ ಆರೋಪಗಳಿವೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಕಡಲಾಮೆಗಳ ಮೊಟ್ಟೆಇಟ್ಟಿರುವ ಪ್ರದೇಶದಲ್ಲಿ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಸ್ಥಳೀಯರ ಸಹಕಾರದಿಂದ ನಡೆಸುತ್ತ ಬಂದಿದೆ.

ಈ ಒಂದು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ 9ಕ್ಕೂ ಹೆಚ್ಚು ಕಡಲಾಮೆಗಳು ಇಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತಬಂದಿದೆ.

ಇತ್ತೀಚಿನ ಈ ಬೆಳವಣಿಗೆಯು ವಾಣಿಜ್ಯ ಬಂದರು ವಿವಾದಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದ್ದು ಬಂದರು ವಿರೋಧಿ ಹೋರಾಟಗಾರರ ಕಾನೂನು ಹೋರಾಟಕ್ಕೆ ಹೆಚ್ಚಿನ ಬಲಬಂದಿದೆ ಎನ್ನಲಾಗುತ್ತಿದೆ. ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ಇತ್ತೀಚೆಗೆ ಪೋಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲೂ ಸಹ ಪತ್ತೆಯಾಗಿದ್ದವು.

ಇತ್ತೀಚಿನ ಒಂದು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಾಣಿಜ್ಯ ಬಂದರು ಯೋಜನೆಗಾಗಿ ಸಿಆರ್ ಝೆಡ್ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿನ ಕಡಲತೀರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಕಡಲಾಮೆಗಳು ಮೊಟ್ಟೆ ಇಡುವ ಕಡಲತೀರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಬಂದರು ಒಳನಾಡು ಜಲ ಸಾರಿಗೆ ಇಲಾಖೆ ಮತ್ತು ರಾಜ್ಯಸರಕಾರವನ್ನು ಆಗ್ರಹ ಪಡಿಸಿದ್ದಾರೆ.
ಒಂದೇ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button