Kannada NewsKarnataka News

ಬದಲಾವಣೆಯಾಗುತ್ತಿರುವ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜ ಸೇವೆಯ ಪಾತ್ರ

ಬದಲಾವಣೆಯಾಗುತ್ತಿರುವ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜ ಸೇವೆಯ ಪಾತ್ರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದಲ್ಲಿ TEQIP 1.3 ಯೋಜನೆಯಡಿಯಲ್ಲಿ ಬದಲಾವಣೆಯಾಗುತ್ತಿರುವ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜ ಸೇವೆಯ ಪಾತ್ರ ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರ ಮಟ್ಟದ ಸಮ್ಮೇಳನವನ್ನು  ಏರ್ಪಡಿಸಲಾಗಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭವು ಶುಕ್ರವಾರ ಜರುಗಿತು.
ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಅವರು ಮುಖ್ಯ ಅತಿಥಿಗಳಾಗಿ ಸಮ್ಮೇಳನವನ್ನು ಉದ್ಘಾಟಿಸಿದರು. ವಿತಾವಿ ಕುಲಪತಿ ಡಾ. ಕರಿಸಿದ್ದಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ ಗಣನಾಥ ಶೆಟ್ಟಿ ಯಕ್ಕರ, ಎನ್.ಎಸ್.ಎಸ್. ಅಧಿಕಾರಿಗಳು, ಕರ್ನಾಟಕ ಸರ್ಕಾರ ಹಾಗೂ  ಸಂತೋಷ ಪಿ. ಎನ್., ಎನ್.ಎಸ್.ಎಸ್. ಯುಥ್ ಅಧಿಕಾರಿಗಳು, ಭಾರತ ಸರ್ಕಾರ ಅವರು ಗೌರವಾನ್ವಿತ ಅತಿಥಿಗಳಾಗಿದ್ದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸುಲಿಬೆಲೆ ಅವರು ನೈಜ ಪ್ರಪಂಚಕ್ಕೆ ಸ್ಪಂದಿಸುವಂತಹ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆ ಇದೆ. ಮಾನವೀಯತೆ, ನೈತಿಕತೆ ಹಾಗೂ ಮಾನವ ಜೀವನದ ಶೈಲಿಯನ್ನು ನಿರ್ಮಿಸುವುದು ಶಿಕ್ಷಣದ ಉದ್ಧೇಶವಾಗಬೇಕೆಂದರು. ಯುವಕರು ನಿಸ್ವಾರ್ಥದಿಂದ ಸಮಾಜ ಸೇವೆಗೆ ಮುಂದಾಗಬೇಕೆಂದು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ಪುನರನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯದಡಿಯಲ್ಲಿ ೧೬೦ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಎನ್.ಎಸ್.ಎಸ್. ಘಟಕಗಳನ್ನು ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ಎನ್.ಎಸ್.ಎಸ್. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇಂದಿನ ಯುವ ಜನಾಂಗದ ಮೇಲೆ ಗುರುತರ ಜವಾಬ್ದಾರಿಗಳಿದ್ದು, ಯುವಕರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಮಾಹಿತಿ ಸಂಗ್ರಹಿಸಿ, ನೀತಿ ನಿರೂಪಕರಿಗೆ ವಿನಿಮಯ ಮಾಡಿಕೊಳ್ಳುವಂತಹ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗೌರವಾನ್ವಿತ ಅತಿಥಿಗಳಾದ ಡಾ. ಗಣನಾಥ ಶೆಟ್ಟಿ ಹಾಗೂ  ಸಂತೋಷ ಪಿ. ಎನ್. ಅವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿವರಿಸಿದರು. ವಿತಾವಿ ಪರೀಕ್ಷಾ ವಿಭಾಗದ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ ಅವರು ಸ್ವಾಗತಿಸಿದರು. ವಿತಾವಿ ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಅಪ್ಪಾಸಾಬ ಎಲ್. ವಿ. ಅವರು ವಂದನಾರ್ಪಣೆ ಮಾಡಿದರು. ದೇಶದ ವಿವಿಧ ಭಾಗಗಳಿಂದ ೫೦೦ಕ್ಕೂ ಹೆಚ್ಚು ಎನ್.ಎಸ್.ಎಸ್. ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button