Belagavi NewsBelgaum NewsKannada NewsKarnataka NewsLatestNational

*ಬೆಳಗಾವಿಗೆ RSS ಸರಸಂಘಚಾಲಕ ಡಾ. ಮೋಹನ್ ಭಾಗವತ್: 8 ದಿನ ವಾಸ್ತವ್ಯ*

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಬೆಳಗಾವಿಯಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗ್ವತ ಬೆಳಗಾವಿಗೆ ಆಗಮಿಸಲಿದ್ದು, 8 ದಿನ ಇಲ್ಲಿಯೇ ವಾಸ್ತವ್ಯಹೂಡಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಈ ವರ್ಷ ಕರ್ನಾಟಕದ ಬೆಳಗಾವಿಯಲ್ಲಿ ನಡೆಯಲಿದ್ದು, ಇದರಲ್ಲಿ ಮೋಹನ್ ಭಾಗವತ ಸೇರಿದಂತೆ ಸಂಘದ ಎಲ್ಲ ಪ್ರಮುಖರು ಭಾಗವಹಿಸಲಿದ್ದಾರೆ. ಜುಲೈ 6 ರಿಂದಲೇ ಸಂಘದ ವಿವಿಧ ಸ್ತರದ ಸ್ವಯಂ ಸೇವಕರ ಸಭೆಗಳು ಆರಂಭವಾಗಲಿದ್ದು, ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಜುಲೈ 10, 11 ಹಾಗೂ 12ರಂದು (ಯುಗಾಬ್ದ 5128, ವಿಕ್ರಮ ಸಂವತ್ 2083, ಜ್ಯೇಷ್ಠ/ಉತ್ತರ ಭಾರತದ ಪ್ರಕಾರ ಆಷಾಢ ಕೃಷ್ಣ ದಶಮಿ, ಏಕಾದಶಿ, ದ್ವಾದಶಿ ಹಾಗೂ ತ್ರಯೋದಶಿ) ನಡೆಯಲಿದೆ.
ಈ ಸಭೆಯಲ್ಲಿ ದೇಶದಾದ್ಯಂತದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಸಂಘದ ಸಂಘಟನಾ ವ್ಯವಸ್ಥೆಯಂತೆ ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳಿಂದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಸಹ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
2026ರ ಮಾರ್ಚ್ ತಿಂಗಳಲ್ಲಿ ಹರಿಯಾಣದ ಸಮಾಲ್ಖಾದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನಂತರ, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ದೇಶದಾದ್ಯಂತ ವಿವಿಧ ಹಂತಗಳ ಸಂಘ ಶಿಕ್ಷಣ ವರ್ಗಗಳು ಯಶಸ್ವಿಯಾಗಿ ನಡೆದವು. ಈ ಸಭೆಯಲ್ಲಿ ಶಾಖಾ ಮಟ್ಟದಲ್ಲಿ ವಾರ್ಷಿಕ ಕಾರ್ಯ ಯೋಜನೆಯ ಅನುಷ್ಠಾನದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಯಲಿದೆ.
ಸಂಘ ಶತಾಬ್ದಿ ವರ್ಷದ ಅಂಗವಾಗಿ ನಡೆದಿರುವ ಶಾಖಾ ಕಾರ್ಯದ ವಿಸ್ತರಣೆಯ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಶಾಖೆಗಳ ಸಂಖ್ಯೆಯನ್ನು ಇನ್ನಷ್ಟು ಗರಿಷ್ಠ ಮಟ್ಟಕ್ಕೆ ವಿಸ್ತರಿಸುವ ಕುರಿತು ಚರ್ಚೆ ನಡೆಯಲಿದೆ. ಅಲ್ಲದೆ, 2026ರ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ, ಶತಾಬ್ದಿ ವರ್ಷದಲ್ಲಿ ಪೂರ್ಣಗೊಂಡ ಕಾರ್ಯಕ್ರಮಗಳ ಅವಲೋಕನ, ಉಳಿದಿರುವ ಕಾರ್ಯಕ್ರಮಗಳ ಯೋಜನೆ ಹಾಗೂ ಸರಸಂಘಚಾಲಕರ 2026–27ರ ಪ್ರವಾಸ ಯೋಜನೆ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಗುವುದು.
ಸಂಘ ಶತಾಬ್ದಿ ವರ್ಷದ (2025–26) ಉಳಿದ ಕಾರ್ಯಕ್ರಮಗಳು 2026ರ ಅಕ್ಟೋಬರ್ 20ರಂದು ವಿಜಯದಶಮಿಯವರೆಗೆ ಮುಂದುವರಿಯಲಿವೆ.
ಸಭೆಯಲ್ಲಿ ಭಾಗವಹಿಸುವ ಪ್ರಚಾರಕರು ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿ ಹಾಗೂ ಜನಗಣತಿ ಸೇರಿದಂತೆ ಸಮಕಾಲೀನ ಪ್ರಮುಖ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, ಅವುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ ಸರ್ಕಾರ್ಯವಾಹರುಗಳಾದ ಡಾ. ಕೃಷ್ಣಗೋಪಾಲ್, ಸಿ. ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ತ, ಆಲೋಕ್ ಕುಮಾರ್, ಅತುಲ್ ಲಿಮಯೆ, ಜೊತೆಗೆ ಅಖಿಲ ಭಾರತೀಯ ಕಾರ್ಯ ವಿಭಾಗ ಪ್ರಮುಖರು ಹಾಗೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ.
ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಈ ಸಭೆಯ ನಿಮಿತ್ತ ಜುಲೈ 6, 2026ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

Home add -Advt

Related Articles

Back to top button