ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಆರ್ ಎಸ್ ಎಸ್ ಕುರಿತು ಸ್ವಾರಸ್ಯಕರವಾದ ಚರ್ಚೆ ನಡೆಯಿತು. ನಮ್ಮ ಆರ್ ಎಸ್ ಎಸ್ ಬಗ್ಗೆ ಯಾಕಿಷ್ಟು ವಿರೋಧ? ಎಂದು ಸ್ಪೀಕರ್ ಕಾಗೇರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸುತ್ತಿದ್ದಂತೆ ಹಲವು ವಿಚಾರಗಳು ಚರ್ಚೆಯಾದವು.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ಕಾನೂನು ಸುವ್ಯವಸ್ಥೆ ಬಗ್ಗೆ ಸುದೀರ್ಘವಾಗಿ ಪ್ರಸ್ತಾಪಿಸುತ್ತಾ, ಮೊದಲು ನಾವೆಲ್ಲರೂ ಮನುಷ್ಯರು ಆಮೇಲೆ ಬಿಜೆಪಿ, ಕಾಂಗ್ರೆಸ್, ಆರ್ ಎಸ್ ಎಸ್… ಎಂದು ಹೇಳುತ್ತಿದ್ದಂತೆ ಸ್ಪೀಕರ್ ಕಾಗೇರಿ ಅದ್ಯಾಕೆ ನಮ್ಮ ಆರ್ ಎಸ್ ಎಸ್ ಬಗ್ಗೆ ನಿಮಗಿಷ್ಟು ವಿರೋಧ? ಎಂದು ಪ್ರಶ್ನಿಸಿದರು.
ಸ್ಪೀಕರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಜಮೀರ್ ಅಹ್ಮದ್, ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ಅದು ಹೇಗೆ ನಮ್ಮ ಆರ್ ಎಸ್ ಎಸ್ ಎನ್ನುತ್ತೀರಿ. ಸ್ಪೀಕರ್ ಅವರಿಂದ ಇಂತಹ ಹೇಳಿಕೆ ಸರಿಯಲ್ಲ ಎಂದರು. ಇದಕ್ಕೆ ತಿರಿಗೇಟು ನೀಡಿದ ಸ್ಪೀಕರ್ ಕಾಗೇರಿ, ಹೌದು. ನಮ್ಮ ಆರ್ ಎಸ್ ಎಸ್ಸೆ, ಇಂದಲ್ಲ ನಾಳೆ ನೀವು ಕೂಡ ಆರ್ ಎಸ್ ಎಸ್ ಗೆ ಸೇರುತ್ತೀರಾ. ಮುಂದೊಂದು ದಿನ ನೀವು ಕೂಡ ನಮ್ಮ ಆರ್ ಎಸ್ ಎಸ್ ಎಂದು ಹೇಳಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಕಂದಾಯ ಸಚಿವ ಆರ್.ಅಶೋಕ್, ಆರ್ ಎಸ್ ಎಸ್ ಇಂದು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ. ರಾಷ್ಟ್ರಪತಿ ಆರ್ ಎಸ್ ಎಸ್ ನವರು, ಪ್ರಧಾನಿ ಮೋದಿ ಆರ್ ಎಸ್ ಎಸ್ ನವರು.ಮುಖ್ಯಮಂತ್ರಿಗಳು ಕೂಡ ಆರ್ ಎಸ್ ಎಸ್ ನಿಂದ ಬಂದವರು. ಹೀಗಿರುವಾಗ ದೇಶಾದ್ಯಂತ ಆರ್ ಎಸ್ ಎಸ್ ವ್ಯಾಪಿಸಿದೆ. ಅಂದಮೇಲೆ ಇಲ್ಲಿರುವವರೆಲ್ಲರೂ ನಮ್ಮ ಆರ್ ಎಸ್ ಎಸ್ ಎಂದು ಹೇಳಲೇಬೇಕು ಎಂದರು.
ಇದಕ್ಕೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ದುರಾದೃಷ್ಟ ಇದು ಎಂದರು. ಅದಕ್ಕೆ ಮತ್ತೆ ಉತ್ತರಿಸಿದ ಆರ್.ಅಶೋಕ್, ದುರಾದೃಷ್ಟ ಅಲ್ಲ, ಅದೃಷ್ಟ ಎಂದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ