ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಲಾಕ್‌ಡೌನ್ ಅವಧಿಯಲ್ಲಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಟ್ಟೆ, ಪಾತ್ರೆ ಮತ್ತು ಸರಾಫಿ ವ್ಯಾಪಾರಸ್ಥರು ವಹಿವಾಟು ನಡೆಸಲು ಶನಿವಾರದಿಂದ ಬೆಳಿಗ್ಗೆ ೯ ರಿಂದ ಸಂಜೆ ೬ರ ವರೆಗೆ ಆರಂಭಿಸಬಹುದು. ಆದರೆ ಲಾಕ್‌ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ನಗರಸಭೆಯಲ್ಲಿ ವ್ಯಾಪಾರಸ್ಥರೊಂದಿಗೆ ಶುಕ್ರವಾರ ಸಭೆ ಜರುಗಿಸಿ ಅವರು ಮಾತನಾಡಿದರು. ’ಕೊರೊನಾ ವಾರಿಯರ್ಸ್‌ಗಳಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೇ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ಬಹಳಷ್ಟಿದೆ. ಅವರ ಜೊತೆಗೆ ಎಲ್ಲ ವ್ಯಾಪಾರಸ್ಥರೂ ಸಹ ಈ ಅವಧಿಯಲ್ಲಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸರಕಾರದ ಆದೇಶ ಪಾಲಿಸಿ ಸಹಕರಿಸಿದ್ದಾರೆ. ತಾಲ್ಲೂಕಿನ ಇಡಿ ನಾಗರಿಕರು ಸಹಕರಿಸಿದ್ದು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲೆ ಮೊಬೈಲ್, ಸ್ಟೇಶನರಿ, ಬೈಸಿಕಲ್, ಟ್ರಾನ್ಸ್‌ಪೋರ್ಟ್, ಮೆಕಾನಿಕ್ ಮೊದಲಾದ ಅಂಗಡಿಗಳನ್ನು ತೆರೆಯುವ ನಿಟ್ಟಿನಲ್ಲಿ ಚರ್ಚಿಸಿ ಅನುಮತಿ ನೀಡಲಾಗುವುದು’ ಎಂದರು.
’ಆದರೆ ವ್ಯಾಪಾರಸ್ಥರು ಯಾವುದೆ ತಕರಾರು ಬರದಂತೆ ವಹಿವಾಟು ನಡೆಸಬೇಕು. ೧೪೪ ಕಲಂ ಇನ್ನೂ ಜಾರಿಯಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಯಮ ಉಲ್ಲಂಘಿಸಿದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಮಹಾವೀರ ಬೋರನ್ನವರ ಮಾತನಾಡಿ ’ಕೇವಲ ನಗರಸಭೆಯಿಂದ ಲೈಸನ್ಸ್ ಹೊಂದಿದವರು ಮಾತ್ರ ಕಡ್ಡಾಯವಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಅಂಗಡಿಗಳನ್ನು ಆರಂಭಿಸಬೇಕು’ ಎಂದರು. ತಹಶೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ ’ನಿಯಮ ಉಲ್ಲಂಘಿಸಿದವರ ಅಂಗಡಿ ಸೀಜ್ ಮಾಡಿ ಲೈಸನ್ಸ್ ರದ್ದುಗೊಳಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಜಯವಂತ ಭಾಟಲೆ, ರಾಜು ಗುಂಡೇಶಾ ಮೊದಲಾದವರು ಸಹಿತ, ನಗರಸಭೆ ಸದಸ್ಯರು, ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ