Kannada NewsKarnataka News

ಕೊರತೆಯನ್ನು ಸವಾಲಾಗಿ ಸ್ವೀಕರಿಸುವ ಗ್ರಾಮೀಣ ಮಹಿಳೆಯರು -ಮಂಜಮ್ಮ ಜೋಗತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ಪ್ರದೇಶದ ಮಹಿಳೆಯರು ಅತ್ಯಂತ ಕಷ್ಟಮಯ ಜೀವನ ಸಾಗಿಸುತ್ತಾರೆ. ಅನೇಕ ತಾಪತ್ರಯಗಳ ನಡುವೆಯೂ ಸಾಧಕರಾಗಿ ಹೊರಹೊಮ್ಮುತ್ತಾರೆ. ಅವರಲ್ಲಿ ಅಗಾಧವಾದ ಶಕ್ತಿಯಿದ್ದು, ಕೊರತೆಯನ್ನು ಸವಾಲಾಗಿ ಸ್ವೀಕರಿಸುವ ಗ್ರಾಮೀಣ ಮಹಿಳೆಯರು ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಅದರಂತೆ ಅವರಿಗೆ ಗೌರವಾಧರಗಳು ಅಧಿಕ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಭೂಷಣ ಮಂಜಮ್ಮ ಜೋಗತಿ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸ್ತ್ರೀ ಶಕ್ತಿ ಸಂಘವು ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಲಿಂಗಬೇಧ ತಾರತಮ್ಯ ಅಧಿಕಗೊಳ್ಳುತ್ತಿದೆ. ಅದು ತಪ್ಪಬೇಕಾದರೆ ಸುಶಿಕ್ಷಿತ ಸಮಾಜ ನಿರ‍್ಮಾಣ ಮಾಡಬೇಕಾಗಿದೆ. ಶಿಕ್ಷಣ ಪಡೆದರೆ ಸಾಲದು ಅದನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ಹೆಣ್ಣು ಮಗು ಜನಿಸಿದರೆ ಅಯ್ಯೋ ಎನ್ನುವವರೆ ಬಹಳ ಜನ. ಆದರೆ ಅದೇ ಹೆಣ್ಣು ಮನೆಯ ಬೆಳಕು ಎಂಬುದನ್ನು ಅರಿತುಕೊಳ್ಳಬೇಕು. ಇಂದು ಸ್ತ್ರೀ ಎಂದರೇನೆ ಒಂದು ಶಕ್ತಿ ಅಡಗಿದೆ. ಸ್ತ್ರೀ ಇಲ್ಲದ ಸಮಾಜವನ್ನು ಉಹಿಸಿಕೊಳ್ಳುವದು ಅಸಾಧ್ಯ. ಆದ್ದರಿಂದ ಮಗಳಾಗಿ ಹುಟ್ಟುವ ಹೆಣ್ಣು ತಾಯಿಯಾಗಿ ಎಲ್ಲ ವಿಧಗಳನ್ನು ನಿಭಾಯಿಸುತ್ತಾಳೆ ಸ್ತ್ರೀಯನ್ನು ಕಡೆಗಣಿಸಬೇಡಿ ಎಂದು ಸಲಹೆ ನೀಡಿದರು.
ನಾನೂ ಕೂಡ ತೃತೀಯ ಲಿಂಗಿಯಾಗಿದ್ದು, ಇಂದು ಈ ಮಟ್ಟಕ್ಕೆ ಬೆಳೆಯಬೇಕಾದರೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಆದರೆ ನಮ್ಮಲ್ಲಿರುವ ಛಲವನ್ನು ನಾವು ಬಿಟ್ಟುಕೊಡಬಾರದು. ಆದ್ದರಿಂದಲೇ ನಾನು ನನ್ನಲ್ಲಿರುವ ಕಲೆಯನ್ನು ಮುಚ್ಚಿಡದೇ ಸಮಾಜಕ್ಕೆ ಅರ್ಪಿಸುತ್ತ, ಜನರಿಗೆ ತರಬೇತಿ ನೀಡುತ್ತ, ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಉಪಯೋಗಿಸಿಕೊಂಡೆ. ಆದರೆ ಸಮಾಜ ನನ್ನನ್ನು ನೋಡುವ ದೃಷ್ಟಿಯೇ ಬೇರೆಯಿತ್ತು. ಆದರೂ ನಾನೂ ಯಾವುದಕ್ಕೂ ಎದೆಗುಂದದೆ ಮುನ್ನಡೆದೆ. ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಆದನ್ನೇ ನಾನು ಸಮಾಜದ ಉದ್ದಾರಕ್ಕೆ ಸದುಪಯೋಗವಾಗುವಂತೆ ತೃತೀಯಲಿಂಗಿಗಳಿಗೆ ಜಾನಪದ ಹಾಗೂ ಕುಣಿತ ಕಲೆಯ ಕುರಿತು ತರಬೇತಿ ನೀಡಿ ಅವರು ಯಾರ ಹಂಗಿಗೂ ತಲೆಬಾಗದೇ ಒಳ್ಳೆಯ ಜೀವನ ನಡೆಸುವಂತಾಗುವ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ ಎಂದು ವಿವರಿಸಿದರು.
ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಕಾರಣ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಪ್ರತಿವರ್ಷ ೧೦೦ ಮಕ್ಕಳಿಗೆ ತರಬೇತಿ ನೀಡಿ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವುದು ನನ್ನ ಗುರಿ ಎಂದ   ಅವರು, ಹಳ್ಳಿಗಳಲ್ಲಿ ೭ ಎಂದರೆ ಕೀಳಾಗಿ ನೋಡುತ್ತಾರೆ. ಆದರೆ ಸಪ್ತರ್ಷಿಗಳು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆ ಇಂದು ೭ ಸಾಗರದಾಚೆಗೂ ಹೆಸರು ಮಾಡಿದೆ. ಕೆಎಲ್‌ಇ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಅದರಡಿ ಬೆಳೆದ ಎಷ್ಟೋ ಜನರು ಇಂದು ತಮ್ಮ ಸೇವೆಯ ಮೂಲಕ ಸಮಾಜ ತಿದ್ದುವ ಕಾರ‍್ಯದಲ್ಲಿ ತೊಡಗಿಕೊಂಡಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಶ್ಲಾಘಿಸಿದರು.
ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಸ್ತ್ರೀಯಯನ್ನು ತಾಯಿಯೆಂದು ಪೂಜಿಸುವ ನಮ್ಮ ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ದೌರ್ಜನ್ಯದಂತ ಪ್ರಕರಣಗಳನ್ನು ನಿರ್ಮೂಲನೆ ಮಾಡಬೇಕಾದರೆ ಹುಡುಗಿಯರಿಗೆ ಶಿಕ್ಷಣವನ್ನು ಅತ್ಯವಶ್ಯವಾಗಿ ನೀಡಬೇಕು. ಹುಡುಗ ಉನ್ನತ ಶಿಕ್ಷಣ ಪಡೆದರೆ ಸ್ವಾರ್ಥಿಯಾಗುತ್ತಾನೆ. ಅದೇ ಹುಡುಗಿ ಶಿಕ್ಷಣ ಪಡೆದರೆ ಒಂದು ಕುಟುಂಬ ಬದಲಾವಣೆಗೆ ನಾಂದಿ ಹಾಡುತ್ತದೆ. ಅದಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಕರೆ ನೀಡಿದರು.
ವೇದಿಕೆ ಮೇಲೆ ಆಶಾತಾಯಿ ಕೋರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ ವಿವೇಕ ಸಾವೋಜಿ, ಡಾ. ವಿ ಎ ಕೋಠಿವಾಲೆ, ಡಾ. ಪ್ರೀತಿ ದೊಡವಾಡ, ಡಾ ಅಲ್ಕಾ ಕಾಳೆ, ಡಾ. ಸುಜಾತಾ ಜಾಲಿ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ನೇಹಾ ದಡೇದ, ಡಾ. ಹರಪ್ರೀತ ಕೌರ,ಡಾ ರೇಣುಕಾ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು. ಡಾ ಸ್ನೇಹಲ್ ಧರ‍್ಮಾಯತ ಹಾಗೂ ಡಾ ಜ್ಯೋತಿ ಕಾವಳೇಕರ ಅವರು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button