*ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಧಕ್ಕೆ ಬಂದಾಗ ಹೋರಾಟ ಅನಿವಾರ್ಯ: ಎಸ್.ಆರ್.ಹಿರೇಮಠ*
ಪ್ರಗತಿವಾಹಿನಿ ಸುದ್ದಿ: ಪ್ರಸಕ್ತ ಲೋಕಸಭೆ ಚುನಾವಣೆ ಐತಿಹಾಸಿಕ ಮತ್ತು ಮಹತ್ವದ ಚುನಾವಣೆ. ಸ್ವಾತಂತ್ರ‍್ಯ ನಂತರ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಪ್ರಹಾರ ನಡೆಸಿದ ಬೇರೆ ಸರ್ಕಾರ ಇಲ್ಲ. ಈ ಸರ್ಕಾರ ಕಿತ್ತೊಗೆಯಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ಸಿಟಿಜನ್ಸ್ ಫಾರ್ ಡೆಮೆಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ ಕರೆ ನೀಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಗಂಡಾಂತರ ಇರುವಾಗ ನಾವು ನಮ್ಮ ಕರ್ತವ್ಯ ನಿರ್ವಹಿಸದಿದ್ದಾಗ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಜನರು ತುರ್ತು ಪರಿಸ್ಥಿತಿ ವೇಳೆ ಯಾವ ರೀತಿ ಇಂದಿರಾ ಸರ್ಕಾರ ಕೆಡವಿದರೋ ಅದೇ ರೀತಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಾತ್ರಿಯಾಗಿದೆ ಎಂದರು.
ದೇಶದ ಜನರಿಗೆ ಸುಳ್ಳು ಹೇಳಿ ಸಂವಿಧಾನ ತಿದ್ದುಪಡಿ ಮಾಡುವ ಹೇಳಿಕೆ ನೀಡುವ ಬಿಜೆಪಿಯವರಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಬೇಕಿದೆ. ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತವನ್ನು ನೋಡಿ ಚಲಾವಣೆ ಮಾಡಬೇಕು. ತುರ್ತು ಪರಿಸ್ಥಿತಿಯ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ನಾವು ಯಾವುದೇ ಪಕ್ಷದ ಪರವಾಗಿಲ್ಲ. ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಧಕ್ಕೆ ಬಂದಾಗ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಸಚಿವ ಸಂಪುಟದ ಸದಸ್ಯರು ಎಲ್ಲ ಗಂಭೀರವಾದ ಕಾನೂನು ಬಾಹಿರ ನಡೆಗಳನ್ನು, ಅಕ್ರಮಗಳನ್ನು ಹಾಗೂ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ವಿಶೇಷ ತನಿಖೆ ನಡೆಸಿ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿ ಆಳ್ವಿಕೆಯ ವಿರುದ್ಧ ಜನತಾ ಆರೋಪ ಪಟ್ಟಿ ಬಿಡುಗಡೆಯಾಗಿದೆ. ಸಿಟಿಜನ್ಸ್ ಫಾರ್ ಡೆಮೊಕ್ರಸಿ ಮತ್ತು ಸಮಾನ ಮನಸ್ಕ ಸಂಘಟನೆಗಳ ಮೂಲಕ ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಎನ್‌ಡಿಎ ಆಳ್ವಿಕೆಯ ವಿರುದ್ಧ ಸುಮಾರು 29 ಪುಟಗಳ ಜನತಾ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನಡೆಸಿದ 10 ವರ್ಷಗಳ ಆಡಳಿತದ ತನಿಖೆಗಳನ್ನು ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಬೇಕು. ಮೋದಿ ಸಚಿವ ಸಂಪುಟದವರು ನಡೆಸಿದ ಭ್ರಷ್ಟಾಚಾರದ ಕುರಿತು ತಡವಾಗಿಯಾದರೂ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚುನಾವಣೆಯ ಬಾಂಡ್ ಮೂಲಕ ಬಿಜೆಪಿಯ ಕೇಂದ್ರ ಸರಕಾರ ಕೋಟ್ಯಂತರ ರೂ.ಗಳನ್ನು ಲೂಟಿ ಮಾಡಿದ್ದಾರೆ. ಇದರಿಂದಾಗಿ ಮುಕ್ತ ಹಾಗೂ ಯೋಗ್ಯ ಚುನಾವಣೆ ಪಾವಿತ್ರತೆಯನ್ನು ನಾಶ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎಸ್.ಚೌಗುಲಾ, ಉಗ್ರನರಸಿಂಹ ಗೌಡ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ