ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖ್ಯಾತ ಉದ್ಯಮಿ, ಫ್ಲಿಪ್‍ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಸಚಿನ್ ಬನ್ಸಾಲ್ ಪತ್ನಿ ಪ್ರಿಯಾ ಬನ್ಸಾಲ್ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಸಚಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಪತ್ನಿ ದೂರಿನ ಹಿನ್ನಾಲೆಯಲ್ಲಿ ಸಚಿನ್ ಬನ್ಸಾಲ್ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಫೆ. 28ರಂದು ಸಚಿನ್ ಬನ್ಸಾಲ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಆರಂಭಗೊಂಡಿದೆ ಎಂದು ಕೋರಮಂಗಲ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಸಚಿನ್ ಅವರ ತಂದೆ ಸತ್‍ಪ್ರಕಾಶ್ ಅಗರವಾಲ್, ತಾಯಿ ಕಿರಣ್ ಬನ್ಸಾಲ್, ಸಹೋದರ ನಿತಿನ್ ಬನ್ಸಾಲ್ ಹೆಸರನ್ನು ಕೂಡ ಪ್ರಿಯಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆ ಬಳಿಕ ನಾನು ಪತಿ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದು, ನಮಗೆ ಗಂಡು ಮಗುವಿದೆ. ಮದುವೆ ಆದಾಗಿನಿಂದಲೂ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಲೇ ಬರುತ್ತಿದ್ದಾರೆ. ಅಲ್ಲದೇ ದೆಹಲಿಯಲ್ಲಿ ನನ್ನ ತಂಗಿ ಮೇಲೆ ಕೂಡ ಪತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ನನ್ನ ಪತಿ ಜೊತೆ ಅತ್ತೆ, ಮಾವ, ಮೈದುನ ಕೂಡ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಸಚಿನ್ ಪ್ರಯತ್ನಿಸಿದ್ದರು. ಈ ವಿಚಾರಕ್ಕೆ ನಾನು ಒಪ್ಪದೇ ಇದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರಿಯಾ ಉಲ್ಲೇಖಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ