Latest

ಕುಸುಬೆ ಬೆಳೆಗೆ ಪುನಶ್ಚೇತನ ನೀಡಲು ಕುಸುಬೆ ಪುನರುಜ್ಜೀವನ ಅಭಿಯಾನ

ಪ್ರಗತಿವಾಹಿನಿ ಸುದ್ದಿ; ಧಾರವಾಡ : ರಾಜ್ಯದಲ್ಲಿ ಖಾದ್ಯ ತೈಲ ಕುಸುಬೆ ಎಣ್ಣೆ ಕಾಳು ಬೆಳೆಯನ್ನು ಪುನಶ್ಚೇತನಗೊಳಿಸಲು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಧಾರವಾಡದ ಜಡಿಗೆವಾಡದಲ್ಲಿರುವ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಮುಂದಾಗಿದ್ದು, ಕುಸುಬೆ ಪುನರುಜ್ಜೀವನ ಅಭಿಯಾನಕ್ಕೆ ಚಾಲನೆ ನೀಡಿದೆ. ಇದರ ಮೊದಲ ಹೆಜ್ಜಯಾಗಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಡಿ ಕುಸುಬೆ ಬೆಳೆಗೆ ವೈಭವವನ್ನು ತಂದುಕೊಡಲು ಡಿಸೆಂಬರ್ 1 ರಂದು ನಗರದ ಕೃಷಿ ವಿ.ವಿ.ಯ ಸಿಬ್ಬಂದಿ ತರಬೇತಿ ಘಟಕದಲ್ಲಿ ‘ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ಕುಸುಬೆ ಎಣ್ಣೆಕಾಳು ಬೀಜ ಬೇಸಾಯ’ ಕುರಿತ ಜಾಗೃತಿಯ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಕೃಷಿ ವಿಜ್ಞಾನಿಗಳು, ಸಂಶೋಧಕರು, ರೈತರು ಮತ್ತಿತರ ಪಾಲುದಾರರು ಪಾಲ್ಗೊಳ್ಳಲಿದ್ದು, ಕುಸುಬೆಯ ಮಹತ್ವ ಮತ್ತು ಉತ್ತೇಜನ ಕುರಿತು ಮಾತನಾಡಲಿದ್ದಾರೆ. ಧಾರವಾಡ ಕೃಷಿ ವಿ.ವಿ. ಕುಲಪತಿ ಡಾ. ಪಿ. ಎಲ್. ಪಾಟೀಲ ಕಾರ್ಯಾಗಾರ ಉದ್ಘಾಟಿಸಲಿದ್ದು, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಶಶಿಮೌಳಿ ಕುಲಕರ್ಣಿ, ಕೃಷಿ ವಿ.ವಿ. ವಿಸ್ತರಣಾ ವಿಭಾಗದ ನಿರ್ದೇಶಕ ಡಾ. ಎ.ಎಸ್. ವಸ್ತ್ರದ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ದಕ್ಷಿಣ ವಿಭಾಗದ ಸಂಚಾಲಕ ಪ್ರಸನ್ನಮೂರ್ತಿ ಟಿ, ಬೆಂಗಳೂರು ದಕ್ಷಿಣ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವಿ. ಎಂ,, ಬೆಂಗಳೂರು ಆರ್ಟ ಆಫ್ ಲೀವಿಂಗ್ ಕೃಷಿ ವಿಭಾಗದ ಮುಖ್ಯಸ್ಥ, ಕೃಷಿ ತಜ್ಞ ಉದಯಕುಮಾರ ಕೊಳ್ಳಿಮಠ ಅವರು ಮಾಹಿತಿ ವಿನಿಮಯ ಮಾಡುವರು.

ಕುಸುಬೆ ಎಣ್ಣೆ ಕಾಳಿನ ಮಹತ್ವ :
ವಿಶ್ವಸಂಸ್ಥೆ ಈ ವರ್ಷವನ್ನು ‘ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿದ್ದು, ಕುಸುಬೆ ಬೇಸಾಯದತ್ತ ರೈತರನ್ನು ಪ್ರೋತ್ಸಾಹಿಸಿ, ಆರೋಗ್ಯಕ್ಕೆ ಪೂರಕವಾದ, ಆರ್ಥಿಕವಾಗಿಯೂ ಲಾಭದಾಯಕವಾಗಿರುವ ಕುಸುಬೆ ಬೆಳೆಯಿಂದ ರೈತರ ಆದಾಯ ಹೆಚ್ಚಿಸಲು ನೆರವಾಗಲಿದೆ. ಭಾರತದಲ್ಲಿ ಖಾದ್ಯ ತೈಲಕ್ಕಾಗಿ ಬೆಳೆಸಲಾಗುವ ಎಣ್ಣೆಬೀಜಗಳ ಬೆಳೆಗಳಲ್ಲಿ ಕುಸುಬೆ ಕೂಡ ಒಂದಾಗಿದ್ದು, ಇದರ ಹಳದಿ ಮತ್ತು ಕೆಂಪು ವರ್ಣದ್ರವ್ಯವನ್ನು ಬೆಣ್ಣೆ, ರೇಷ್ಮೆ ಇತ್ಯಾದಿ ಬಣ್ಣಗಳಲ್ಲಿ ಬಳಸಲಾಗುತ್ತಿದೆ. ರಾಜ್ಯದಲ್ಲಿ ಕುಸುಬೆಯ ವಿಸ್ತೀರ್ಣ ಸುಮಾರು ೦.4೦ ಲಕ್ಷ ಹೆಕ್ಟೇರ್ ಇದ್ದು, ಕುಸುಬೆಯ ಸರಾಸರಿ ಉತ್ಪಾದನೆಯು ಹೆಕ್ಟೇರ್‌ಗೆ ಸುಮಾರು 3 ರಿಂದ 4 ಕ್ವಿಂಟಾಲ್‌ನಷ್ಟಿದೆ. ತಂಪಾದ ವಾತಾವರಣದಲ್ಲಿ ಆಳವಾದ ಕಪ್ಪು ಮಣ್ಣಿನಲ್ಲಿ ಉತ್ತಮ ಫಸಲು ಬರುತ್ತದೆ. ಈ ಸಸ್ಯ ಮುಳ್ಳಿನಿಂದ ಕೂಡಿದೆ ಮತ್ತು ಬಹುತೇಕ ಕಡಿಮೆ ನೀರಿನಿಂದ ಬೆಳೆಯಲಾಗುತ್ತದೆ. ಇದು ರಕ್ತವನ್ನು ತೆಳುವಾಗಿಸುತ್ತದೆ. ಕುಸುಬೆ ಬೀಜಗಳು ಶೇಕಡಾ 25 ರಿಂದ 3೦ ರಷ್ಟು ಎಣ್ಣೆ, ಶೇಕಡಾ 15-22 ರಷ್ಟು ಪ್ರೋಟೀನ್ ಮತ್ತು 11-12 ರಷ್ಟು ನಾರಿನಮಂಶವನ್ನು ಹೊಂದಿದೆ. ಇದು ನಿರ್ದಿಷ್ಟ ಪರಿಮಳವನ್ನು ಹೊಂದಿದ್ದು, ಕುಸುಬೆ ಎಣ್ಣೆಯು ರಕ್ತದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಲಿನೋಲಿಯಿಕ್ ಮತ್ತು ಒಲೀಕ್ ಆಮ್ಲವು ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕೊಬ್ಬನ್ನು ಕರಗಿಸುತ್ತದೆ, ಇದು ಅಧಿಕ ರಕ್ತದೊತ್ತಡ ತಗ್ಗಿಸಿ, ರಕ್ತ ಪರಿಚಲನೆ ಮತ್ತು ಇದು ಆರೋಗ್ಯವನ್ನು ಸುಧಾರಿಸುತ್ತದೆ.

ಅಭಿಯಾನದ ಆಶಯ :

ಖಾದ್ಯ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ನಮಗೆ ದೇಶೀಯವಾಗಿರುವ ಕುಸುಬೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ವಿದೇಶಿ ವಿನಿಮಯವನ್ನು ತಗ್ಗಿಸಬಹುದು. ಕುಸುಬೆ ಪುನರುಜ್ಜೀವನ ಅಭಿಯಾನದಡಿ ಬೆಳೆಗಾರರು, ಸಂಶೋಧನಾ ಸಂಸ್ಥೆಗಳು, ಮಾರಾಟಗಾರರು ಮತ್ತು ಗ್ರಾಹಕರ ನಡುವೆ ಸರಿಯಾದ ಸಂಪರ್ಕವನ್ನು ಸ್ಥಾಪಿಸುವ, ವ್ಯಾಪಕ ಆರೋಗ್ಯ ಪ್ರಯೋಜನಗಳಿಗಾಗಿ ಗ್ರಾಹಕರಲ್ಲಿ ಕುಸುಬೆ ಖಾದ್ಯ ತೈಲದ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ವಿಸ್ತರಣಾ ಚಟುವಟಿಕೆಗಳನ್ನು ಸಂಘಟಿಸಲು ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಸಾಧಿಸಲು, ಕುಸುಬೆಯ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ, ರೈತರಿಗೆ ಸುಧಾರಿತ ತಂತ್ರಜ್ಞಾನವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕುಸುಬೆ ಪುನರುಜ್ಜೀವನ ಅಭಿಯಾನಕ್ಕೆ ಕರ್ನಾಟಕದ ಕುಸುಬೆ ಬೆಳೆಯುವ ಜಿಲ್ಲೆಗಳಾದ ಧಾರವಾಡ, ವಿಜಯಪುರ, ಹಾವೇರಿ, ಕಲಬುರ್ಗಿ, ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಸರಣಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ದಕ್ಷಿಣ ವಿಭಾಗದ ಸಂಚಾಲಕ ಪ್ರಸನ್ನಮೂರ್ತಿ ಟಿ, ಬೆಂಗಳೂರು ದಕ್ಷಿಣ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವಿ. ಎಂ,, ಬೆಂಗಳೂರು ಆರ್ಟ ಆಫ್ ಲೀವಿಂಗ್ ಕೃಷಿ ವಿಭಾಗದ ಮುಖ್ಯಸ್ಥ, ಕೃಷಿ ತಜ್ಞ ಉದಯಕುಮಾರ ಕೊಳ್ಳಿಮಠ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸೇರಲು ಮುಂದಾದ ವೈದ್ಯನ ಮೇಲೆ CBI ದಾಳಿ ಬೆದರಿಕೆ; ಡಿಕೆಶಿ ಆಕ್ರೋಶ

https://pragati.taskdun.com/d-k-shivakumarmudigerecongress-samavesha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button