*ಬ್ಯುಟಿಷಿಯನ್ ಗೆ ಪ್ರಪೋಸ್ ಮಾಡಿದ ಮಾಲೀಕ; ವಿರೋಧಿಸಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದ: ವಿಷಯ ತಿಳಿದು ಸಲೂನ್ ಗೆ ನುಗ್ಗಿದ ಪತಿಯಿಂದ ದಾಂಧಲೆ, ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಮಾಲೀಕ ಪ್ರಪೋಸ್ ಮಾಡಿದ್ದಾನೆ. ಆತನ ಪ್ರಪೋಸ್ ವಿರೋಧಿಸಿದ್ದಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂದ ಆಕೆಯ ಪತಿ ಸಲೂನ್ ಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಆಲವಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್, ತನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಒಬ್ಬರಿಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ ಇದನ್ನು ಆಕೆ ನಿರಾಕರಿಸಿದ್ದರು. ಈ ವಿಚಾರವಾಗಿ ಮನಸ್ತಾಪ ಉಂಟಾಗಿ ಮೋಹನ್ ಕುಮಾರ್ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಬ್ಯೂಟಿಷಿಯನ್ನ ಪತಿ ಆಕ್ರೋಶಗೊಂಡಿದ್ದರು. ಪತ್ನಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆತ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್‌ಗೆ ನುಗ್ಗಿದ್ದಾರೆ.
ಬ್ಯೂಟಿಷಿಯನ್ ಪತಿ ಮತ್ತು ಆತನ ಬೆಂಬಲಿಗರು ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸಲಾಗಿದ್ದು, ಬಂದವರೆಲ್ಲರೂ ಸೇರಿ ಸಲೂನ್‌ನಲ್ಲಿ ದಾಂಧಲೆ ನಡೆಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಮೋಹನ್ ಕುಮಾರ್ ಅವರು ಬ್ಯೂಟಿಷಿಯನ್, ಆಕೆಯ ಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.




