
ಪ್ರಗತಿವಾಹಿನಿ ಸುದ್ದಿ: 2023ರ ಸೆಪ್ಟೆಂಬರ್ 13ರಂದು ನೀಡಲಾದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿನೆ ಮಾಡಿದ ಆರೋಪದ ಮೇಲೆ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ವಿರುದ್ಧ ಬೆಂಗಳೂರು ಪ್ರಿನ್ಸಿಪಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಬಂಧಿಸುವಂತೆ ವಾರೆಂಟ್ ಜಾರಿ ಮಾಡಿದೆ.
ಅರ್ಜಿದಾರರು ಮಾನಹಾನಿ ಪ್ರಕರಣವನ್ನು ದಾಖಲಿಸಿ ಪ್ರತಿವಾದಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವಂತೆ ಮನವಿ ಮಾಡಿದ್ದರು.
ಇದನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯ ಮಂಗಳೂರು ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯದ ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವಂತೆ ನಿರ್ದೇಶಿಸಲಾಗಿತ್ತು. ಅಲ್ಲದೇ ಬಂಟ್ವಾಳ ಪೊಲೀಸ್ ಠಾಣೆ ಮತ್ತು ಕಡಬ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪ್ರತಿವಾದಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚನೆ ನೀಡಿತ್ತು.
ನ್ಯಾಯಾಲಯದ ನಿಂದನೆಗಾಗಿ ಪ್ರತಿವಾದಿಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೀಗ ಬಂಧನ ವಾರಂಟ್ ಜಾರಿಗೆ ಬಂದು, ಸಂಚಾರಿ ಸ್ಟುಡಿಯೋನ ಸಂತೋಷ್ ರನ್ನು ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರು ಸುಳ್ಳು ಸುದ್ದಿ, ಮಾನಹಾನಿ ವಿಷಯಗಳಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ತಡೆ ಆದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2023ರ ಸೆಪ್ಟೆಂಬರ್ 13ರಂದು ನ್ಯಾಯಾಲಯವು ತಾತ್ಕಾಲಿಕ ತಡೆ ಆದೇಶ ನೀಡಿದ್ದು, ಪ್ರತಿವಾದಿ ಅಥವಾ ಯಾರಾದರೂ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸ್ಥೆ, ಕುಟುಂಬ ಸದಸ್ಯರು ಅಥವಾ ದೇವಸ್ಥಾನದ ವಿರುದ್ಧ ಸುಳ್ಳು ಆರೋಪ ಮಾಡಬಾರದು, ಮಾನಹಾನಿ ವಿಡಿಯೋಗಳನ್ನು ಪ್ರಕಟಿಸಬಾರದು ಅಥವಾ ಹರಡಬಾರದು ಎಂದು ಸ್ಪಷ್ಟವಾಗಿ ಆದೇಶ ನೀಡಿತ್ತು.
ಈ ಆದೇಶದ ಹೊರತಾಗಿಯೂ ಸಂಚಾರಿ ಸ್ಟುಡಿಯೋ ಇಂತಹ ವಿಷಯಗಳನ್ನು ಪ್ರಕಟಿಸುತ್ತಲೇ ಇದ್ದುದರಿಂದ ಅರ್ಜಿದಾರರು ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯವಾದಿ ಶ್ರೀ ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.



