*ಅಕ್ರಮ ಮರಳು ಅಡ್ಡೆಯ ಮೇಲೆ ಶಾಸಕಿ ದಾಳಿ; ನನ್ನ ಮೇಲೆ ಮರಳು ಲಾರಿ ಹರಿಸುವವರು ಬರಲಿ ನೋಡೋಣ ಎಂದು ಅವಾಜ್*
ಪ್ರಗತಿವಾಹಿನಿ ಸುದ್ದಿ; ದೇವದುರ್ಗ: ಅಕ್ರಮ ಮರಳು ಅಡ್ಡೆ ಮೇಲೆ ಶಾಸಕಿ ಕರೆಮ್ಮ ನಾಯಕ್ ದಾಳಿ ನಡೆಸಿದ್ದು, ಅಧಿಕಾರಿಗಳು ಹಾಗೂ ಪೊಲೀಸರನ್ನು ತರಾತೆಗೆ ತೆಗೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ವ್ಯಾಪಕವಾಗಿ ಮರಳು ಮಾಫಿಯಾ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಮರಳು ದಂಧೆ ನಡೆಯುತ್ತಿದ್ದ ಬಗ್ಗೆ ಶಾಸಕಿಗೆ ಮಾಹಿತಿ ಬರುತ್ತಿದ್ದಂತೆ ಬೆಂಬಲಿಗರೊಂದಿಗೆ ಶಾಸಕಿ ಕರೆಮ್ಮ ದಾಳಿ ನಡೆಸಿದ್ದಾರೆ. ಬಳಿಕ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜೆಸಿಬಿ ಹಾಗೂ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಶಾಸಕಿ ಕರೆಮ್ಮ ಮರಳು ಟಿಪ್ಪರ್ ಒಂದು ತಮ್ಮ ಕಾರನ್ನು ಅಡ್ಡಗಟ್ಟಿದ್ದಾಗಿ ಆರೊಪಿಸಿದ್ದಾರೆ. ನಿನ್ನೆ ರಾತ್ರಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದಾಗ ಮರಳು ಲಾರಿಯೊಂದು ತಮ್ಮ ಕಾರನ್ನು ಅಡ್ಡಗಟ್ಟಿದೆ ಎಂದು ತಡರಾತ್ರಿ ರಸ್ತೆ ಮಧ್ಯೆಯೇ ಶಾಸಕ ಫೇಸ್ ಬುಕ್ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಮರಳು ಟಿಪ್ಪರ್ ಹರಿಸುವವರು ಬರಲಿ ನೋಡೋಣ. ಇಲ್ಲಿಯೇ ಕಾಯುತ್ತಿದ್ದೇನೆ. ಅದ್ಯಾರು ಬರುತ್ತಾರೆ ಬರಲಿ. ನಾನೊಬ್ಬ ಶಾಸಕಿಯಾಗಿಯಲ್ಲ ಓರ್ವ ಹೆಣ್ಣುಮಗಳಾಗಿ ಹೇಳುತ್ತಿದ್ದೇನೆ ಎಂದು ಗುಡುಗಿದ್ದಾರೆ.
ದೇವದುರ್ಗದಲ್ಲಿ ಮರಳು ದಂಧೆ ಅವ್ಯಾತವಾಗಿ ನಡೆಯುತ್ತಿದ್ದು, ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಶಾಸಕಿ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ