ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಖ್ಯಾತ ನಟ-ನಟಿಯರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ನಟ ಲೂಸ್ ಮಾದ ಯೋಗೀಶ್ ಕೂಡ ಐಎಸ್ ಡಿ ವಿಚಾರಣೆಗೆ ಹಾಜರಾಗಿದ್ದು, ನನಗೂ ಡ್ರಗ್ಸ್ ಗೂ ಯಾವುದೇ ಸಂಬಂಧವಿಲ್ಲ. ನಟಿ ರಾಗಿಣಿ ಸಂಪರ್ಕವೂ ತಮಗಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣ ಸಂಬಂಧ ಆಂತರಿಕ ಭದ್ರತಾ ದಳ(ಐಎಸ್ ಡಿ) ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ತಾವು ವಿಚಾರಣೆಗೆ ಹಾಜರಾಗಿ ಬಂದಿದ್ದಾಗಿ ತಿಳಿಸಿದರು. ಪ್ರಸ್ತುತ ನಡೆಯುತ್ತಿರುವ ಪ್ರಕರಣದ ಬಗ್ಗೆ ಜನರಲ್ಲಾಗಿ ಅಧಿಕಾರಿಗಳು ಪ್ರಶ್ನಿಸಿದರು. ನನಗೂ ಈ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ತಿಳಿಸಿದ್ದೇನೆ. ಅಲ್ಲದೇ ನಾನು ಇತ್ತೀಚೆಗೆ ಯಾವುದೇ ಪಾರ್ಟಿಗಳಲ್ಲಿ ಕೂಡ ಭಾಗಿಯಾಗಿಲ್ಲ ಎಂದು ಹೇಳಿದ್ದೇನೆ ಎಂದರು.
ನನಗೆ ಇರುವ ಚಟವೆಂದರೆ ಕುಡಿಯುವುದು, ಸಿಗರೇಟ್ ಸೇದುವುದು, ಗುಟ್ಕಾ ಹಾಕುವುದು. ಇದು ಬಿಟ್ಟರೆ ಬೇರೆ ಯಾವುದೇ ಅಭ್ಯಾಸವಿಲ್ಲ. 2011-12ರ ಬಳಿಕ ನಾನು ಯಾವುದೇ ಪಾರ್ಟಿಗಳಿಗೂ ಹೋಗಿಲ್ಲ. ರಾಜ್ ಕಪ್ ಕ್ರಿಕೆಟ್ ಆಡಲು ಶ್ರೀಲಂಕಾಗೆ ಹೋಗಿದ್ದೆ ಬಿಟ್ಟರೆ ಮತ್ತೆ ಶ್ರೀಲಂಕಾಗೆ ಹೋಗಿಲ್ಲ. 2018ರಲ್ಲೇ ನನ್ನ ಪಾಸ್ ಪೋರ್ಟ್ ಅವಧಿ ಕೂಡ ಮುಗಿದಿದೆ. ಅದು ಕೂಡ ಐಎಸ್ ಡಿ ಅಧಿಕಾರಿಗಳು ವಿಚಾರಣೆ ವೇಳೆ ಹೇಳಿದಾಗಲೇ ನನ್ನ ಪಾಸ್ ಪೋರ್ಟ್ ಅವಧಿ ಮುಗಿದಿರುವುದು ಅರಿವೆ ಬಂತು ಎಂದರು.
ಇನ್ನು ಮಾಧ್ಯಮಗಳಲ್ಲಿ ನನಗೂ ಹಾಗೂ ರಾಗಿಣಿಗೂ ನಿಕಟ ಸಂಪರ್ಕವಿದೆ ಎಂಬ ರೀತಿ ತೋರಿಸಲಾಗುತ್ತಿದೆ. ಆದರೆ ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. 2013ರಲ್ಲಿ ನಾವಿಬ್ಬರು ಒಂದು ಸಿನಿಮಾ ಮಡಿದ್ದೆವು. ಅದೇ ಕೊನೆ. ಅದಾದ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಫೋನ್ ಕಾಲ್, ಮೆಸೇಜ್ ಸಂಪರ್ಕ ಕೂಡ ಇಲ್ಲ. ನನಗೂ ಕುಟುಂಬವಿದೆ. ಒಂದುವರೆ ವರ್ಷದ ಮಗುವಿದೆ. ದಯವಿಟ್ಟು ತಪ್ಪು ಅರ್ಥಬರುವಂತೆ ಸುದ್ದಿ ಪ್ರಸಾರ ಮಾಡಬೇಡಿ ಇದು ಮಾಧ್ಯಮಗಳಲ್ಲಿ ನನ್ನ ವಿನಂತಿ ಎಂದು ಹೇಳಿದರು.
ಐಎಸ್ ಡಿ ಅಧಿಕಾರಿಗಳು ವಿಚಾರಣೆ ವೇಳೆ ರಾಗಿಣಿ ಬಗ್ಗೆ ಒಂದು ಪ್ರಶ್ನೆ ಕೂಡ ಕೇಳಿಲ್ಲ. ಆಕೆಯ ಬಗ್ಗೆ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ಅನಗತ್ಯವಾಗಿ ಸುದ್ದಿಗಳನ್ನು ಹರಡಿಸಲಾಗುತ್ತಿದೆ. ಇನ್ನು ವಿಚಾರಣೆ ವೇಳೆ ನನ್ನ ಮೊಬೈಲ್ ಕೂಡ ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ