ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವಕರಲ್ಲಿ ದೇಶಭಕ್ತಿ, ಅದಮ್ಯ ಚೈತನ್ಯ, ತ್ಯಾಗಜೀವನ, ಪ್ರಾಮಾಣಿಕತೆಯನ್ನು ಉತ್ತೇಜಿಸಲು ಸಂಗೊಳ್ಳಿ ರಾಯಣ್ಣ ಸ್ಪೂರ್ತಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣನ ವೀರಭೂಮಿಯಾದ ನಂದಗಡವು ದೇಶಕ್ಕೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಎಚ್. ಎಂ. ರೇವಣ್ಣ ಆಶಯ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದವತಿಯಿಂದ ’ಸಂಗೊಳ್ಳಿ ರಾಯಣ್ಣ ಜೀವನ ಮತ್ತು ಹೋರಾಟ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ತಿನ ಸದಸ್ಯರಾದ ಎಚ್.ಎಂ. ರೇವಣ್ಣವರು ಮಾತನಾಡುತ್ತ, ಸಂಗೊಳ್ಳಿ ರಾಯಣ್ಣನ ಹೋರಾಟವು ಭಾರತದ ಸ್ವಾತಂತ್ರ್ಯ ಚಳುವಳಿಯ ಪುಟಗಳಲ್ಲಿ ಚಿರಸ್ಥಾಯಿಯಾಗಬೇಕು. ರಾಯಣ್ಣನ ಕುರಿತಾದ ಸಾಹಿತ್ಯಿಕ ಮತ್ತು ಮೌಖಿಕವಾಗಿ ಲಭ್ಯವಾಗುವ ದಾಖಲೆಗಳನ್ನು ಒಂದೆಡೆ ಸೇರಿಸಿ ಅದನ್ನು ಪ್ರಕಟಿಸಬೇಕು. ನಂದಗಡದಲ್ಲಿ ೭೦ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ರಾಯಣ್ಣನ ವಸ್ತು ಸಂಗ್ರಹಾಲಯವು ನಿರ್ಮಾಣವಾಗುತ್ತಿದೆ. ಜೊತೆಗೆ ೮೦ಕೋಟಿ ವೆಚ್ಚದಲ್ಲಿ ರಾಯಣ್ಣ ಹೆಸರಿನಲ್ಲಿ ಸೈನಿಕಶಾಲೆ ಕಾರ್ಯಾರಂಭವಾಗಿರುತ್ತದೆ. ಕಾರ್ಯಕ್ರಮದ ಅತಿಥಿಯಾದ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮಲ್ಲೇಶಪ್ಪವರು ಇಂಗ್ಲೆಂಡ್ ಮತ್ತು ಪುಣೆಯಲ್ಲಿರುವ ಸಂಗೊಳ್ಳಿ ರಾಯಣ್ಣನ ಕುರಿತಾದ ದಾಖಲೆಗಳನ್ನು ತರುವ ಪ್ರಯತ್ನ ನಡೆಯುತ್ತಿದೆ. ಸಂಗೊಳ್ಳಿ ಪೀಠ ಮತ್ತು ನಮ್ಮ ಪ್ರಾಧಿಕಾರವು ಸೇರಿಕೊಂಡು ಸಂಗೊಳ್ಳಿ ರಾಯಣ್ಣನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಎಂದರು.
ಇನ್ನೋರ್ವ ಅತಿಥಿಯಾದ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ಸಲಹೆಗಾರರಾದ ನಾಗಣ್ಣ ಅವರು ನಂದಗಡ ಕ್ಷೇತ್ರವನ್ನು ಒಂದು ಅಪೂರ್ವವಾದ ಪ್ರವಾಸೋದ್ಯಮವಾಗಿ ಪರಿವರ್ತಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ಅಧ್ಯಕ್ಷರಾದ ಡಾ. ಎಂ ಜಯಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಪೀಠದವತಿಯಿಂದ ಪ್ರತಿ ತಿಂಗಳು ವಿಶೇಷ ಉಪನ್ಯಾಸ ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ರಾಯಣ್ಣ ಕುರಿತಾದ ಸಂಶೋಧನ ಲೇಖನಗಳುಳ್ಳ ಕೃತಿಯೊಂದು ರಾಯಣ್ಣನ ಜನ್ಮದಿನವಾದ ಆಗಸ್ಟ್ ೧೫ರಂದು ಲೋಕಾರ್ಪಣೆಗೊಳ್ಳಲಿದೆ. ನಮ್ಮ ಅಧ್ಯಯನ ಪೀಠವು ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪಾಧಿಕಾರದ ಜೊತೆಗೆ ಸೇರಿಕೊಂಡು ಮುಂದಿನ ಯೋಜನೆಗಳ ಕುರಿತು ರೂಪರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದರು.
ಡಾ. ಶೋಭಾ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೀಠದ ಸಂಯೋಜಕರಾದ ಡಾ. ಎಂ. ಎನ್. ರಮೇಶ ಸ್ವಾಗತಿಸಿದರು. ಡಾ. ಜ್ಯೋತಿ ಪಾಟೀಲ ನಿರೂಪಿಸಿದರು. ಡಾ. ಕವಿತಾ ಕುಸುಗಲ್ಲ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಸಿಎಂ ಯಡಿಯೂರಪ್ಪ ನಾಳೆ ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ? ಇಲ್ಲಿದೆ ಸಮಗ್ರ ವಿವರ; ಜಿಲ್ಲೆಯಲ್ಲಿ 19,035 ಜನರ ರಕ್ಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ