ಜವಾಹರ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಶಶಿಕಲಾ ಜೊಲ್ಲೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ನೀರು ಬಹಳ ಮಹತ್ವದ್ದು, ನೀರಿಲ್ಲದೆ ಬದುಕು ಕಷ್ಟ. ಜವಾಹರ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ನೀರು ಸಂಗ್ರಹಣೆಗಾಗಿ ಇನ್ನೂ ಮೂರು ಓಎಚ್‌ಡಿ ಅನುಮೋದನೆಗೊಂಡಿದ್ದು ಅವುಗಳ ನಿರ್ಮಾಣದ ನಂತರ ನಗರಕ್ಕೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದು ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಜವಾಹರ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ’ನಗರದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ನಗರಸಭೆಯು ೧೯೪೫ರಲ್ಲಿ ೬ ಲಕ್ಷ ರೂ. ವೆಚ್ಚದ ಯೋಜನೆಯೊಂದು ರೂಪಿಸಿತು. ನಗರಸಭೆಯಿಂದ ಅರ್ಧದಷ್ಟು ವೆಚ್ಚ ಭರಿಸಲು ಮತ್ತು ಸರ್ಕಾರದಿಂದ ಅರ್ಧದಷ್ಟು ಸ್ವೀಕರಿಸಲು ನಿರ್ಣಯಿಸಲಾಗಿತ್ತು. ’ಜವಾಹರಲಾಲ ನೆಹರು ವಾಟರ್ ವರ್ಕ್ಸ್’ ಎಂಬ ಈ ಯೋಜನೆ ೧೯೫೧ರಲ್ಲಿ ಮುಂಬಯಿ ಪ್ರಾಂತದ ಗೃಹಸಚಿವ ಮುರಾರಜಿ ದೇಸಾಯಿ ಭೂಮಿಪೂಜೆ ಸಲ್ಲಿಸಿದ್ದರು. ಆಗಿನ ಮಹಾರಾಷ್ಟ್ರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಶವಂತರಾವ ಚವಾಣ ನಗರಕ್ಕೆ ಭೆಟಿ ನೀಡಿ ಈ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದರು. ಇಂದಿಗೂ ಈ ಜಲಾಶಯ ನಾಗರಿಕರಿಗೆ ಕುಡಿಯುವ ನೀರು ಪೂರೈಸುತ್ತಿದೆ’ ಎಂದರು.
’೪೬.೨ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಬಹುವರ್ಷಗಳಿಂದ ಹೂಳೆತ್ತುವ ಕಾರ್ಯವಾಗದೇ ಇರುವುದರಿಂದ ಸುಮಾರು ೧೮ ಅಡಿಯಷ್ಟು ಹೂಳು ಸಂಗ್ರಹವಾಗಿದೆ. ಈ ಕಾರ್ಯವನ್ನು ಇಂದು ಕೈಗೆತ್ತಿಕೊಂಡಿದ್ದು ಅದು ಪೂರ್ಣಗೊಳಿಸುವುದೊಂದಿಗೆ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ನಗರಕ್ಕೆ ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಹಲವಾರು ಯೋಜನೆಗಳ ಕುರಿತು ನಾನು ಮತ್ತು ಸಂಸದ ಜೊಲ್ಲೆಯವರು ಚರ್ಚಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಗಳು ನಡೆದಿದ್ದವು. ಇನ್ನು ಹೂಳೆತ್ತುವ ಕಾರ್ಯದ ಕುರಿತು ಚಿಂತಿಸುತ್ತಿರುವ ಸಂದರ್ಭದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಖಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಅವರಿಗೆ ಕಾರ್ಯ ಮಾಡಲು ಮನವಿ ಮಾಡಿಕೊಂಡರು. ಇದಕ್ಕೆ ಅವರು ಒಪ್ಪಿದ ಪರಿಣಾಮ ಈ ಕಾರ್ಯ ನೆರವೇರುತ್ತಿದೆ. ನಗರದ ಜವಾಹರ ಜಲಾಶಯದ ಹೂಳೆತ್ತುವ ಕಾರ್ಯ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಸಹಕಾರದಿಂದ ಉಚಿತವಾಗಿ ನಡೆಯಲಿದೆ. ಜೊತೆಗೆ ಇದಕ್ಕಾಗಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಉಚಿತ ಕಾರ್ಯ ಮಾಡುತ್ತಿದ್ದ ಎಸ್.ಎನ್. ಔತಾಡೆ ಕನ್ಸ್‌ಟ್ರಕ್ಶನ್ ಗುತ್ತಿಗೆದಾರರಿಗೂ ನಗರವಾಸಿಗರಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದರು.
’ಮಾತನಾಡಿದಂತೆ ಮಾಡಿ ತೋರಿಸಲಾಗಿದೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆಯಾಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ. ಜಲಾಶಯದ ಬಳಿಯ ನೀರು ಶುದ್ಧೀಕರಣ ಘಟಕ, ಶಿವಾಜಿ ನಗರದಲ್ಲಿಯ ೨೦ ಲಕ್ಷ ಲೀಟರ್ ಓಎಚ್‌ಡಿ ಮತ್ತು ವೇದಗಂಗಾ ನದಿ ಬಳಿಯ ಜಾಕವೆಲ್‌ಗೆ ಪ್ರತ್ಯೇಕ ವಿದ್ಯುತ್ ಸಂಪರ್ಕವಿರುವುದರಿಂದ ನೀರು ಪೂರೈಕೆಗೆ ಅಡೆತಡೆಯಾಗುತ್ತಿದೆ. ಇದಕ್ಕಾಗಿ ಟಾವರ್‌ಗಳ ಮೂಲಕ ಮೂರೂ ಕೇಂದ್ರದಲ್ಲಿ ಒಂದೇ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೆಸ್ಕಾಂ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ಶ್ರಮದಾನ ಮಾಡುವ ನಿಟ್ಟಿನಲ್ಲಿ ಕೆಲವರು ಆಧಾರರಹಿತ ಆರೋಪ ಮಾಡುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹೂಳೆತ್ತುವ ಕಾರ್ಯಕ್ಕೆ ಶ್ರಮದಾನ ಮಾಡಲು ಬಯಸುವವರು ಇಲ್ಲಿ ಬಂದು ಶ್ರಮದಾನ ಮಾಡಲು ನಾನು ಕೋರುತ್ತೇನೆ. ಅಮೃತ-೨ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ರೂಪಿಸಿ ೪ ಕೋಟಿ ರೂ. ಬೇಡಿಕೆ ಇಡಲಾಗಿದೆ. ಅದು ನವದೆಹಲಿಗೆ ರವಾನಿಸಲಾಗಿದ್ದು ಶೀಘ್ರದಲ್ಲೆ ಅದಕ್ಕೆ ಅನುಮತಿ ಸಿಗಲಿದೆ. ಈ ಜಲಾಶಯ ಅಭಿವೃದ್ಧಿಗೆ ೨.೯೦ ಕೋಟಿ ರೂ., ಸಾಖರವಾಡಿಯಲ್ಲಿರುವ ಕೆರೆಯ ಅಭಿವೃದ್ಧಿಗೆ ೩೦ ಲಕ್ಷ ರೂ., ಛತ್ರಪತಿ ಶಿವಾಜಿ ಸಾಂಸ್ಕೃತಿಕ ಭವನದ ಕಾಮಗಾರಿಗೆ ೩೫ ಲಕ್ಷ ರೂ., ಬಾಳುಮಾಮಾನಗರದಲ್ಲಿಯ ಉದ್ಯಾನವನದ ಅಭಿವೃದ್ಧಿಗಾಗಿ ೨೫ ಲಕ್ಷ ರೂ. ಮತ್ತು ಎಲ್‌ಟಿ ಉದ್ಯಾನವನದ ಅಭಿವೃದ್ಧಿಗಾಗಿ ೨೦ ಲಕ್ಷ ರೂ.ಗಳ ಕ್ರಿಯಾಯೋಜನೆ ಕಳುಹಿಸಲಾಗಿದೆ. ನಗರದಲ್ಲಿ ಮುಂದಿನ ೧೦ ವರ್ಷಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ನೀರಿನ ವ್ಯವಸ್ಥೆ, ನೀರು ಸಂಗ್ರಹಣೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ ’ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬರುವ ಮೂರು ದಿನಗಳಲ್ಲಿ ಬಹಿರಂಗ ಹರಾಜು ಕರೆದು ರೈತರಿಗೆ ಹೂಳು ಕೊಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜೇಂದ್ರ ಗುಂದೇಶಾ, ನೀತಾ ಬಾಗಡಿ, ಸುರೇಶ ಶೆಟ್ಟಿ, ಮಹಾಲಿಂಗೇಶ ಕೋಠಿವಾಲೆ, ಪ್ರತಾಪ ಪಟ್ಟಣಶೆಟ್ಟಿ, ಪ್ರಣವ ಮಾನವಿ, ನಗರಸಭೆ ಸದಸ್ಯರು, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ