*ಶಾಸಕರು ಅಟ್ರಾಸಿಟಿ ಕೇಸ್ ಹಾಕಿದ್ದಾಗ ಬೆಳಗಾವಿ ರಾಜಸ್ಥಾನ ಆಗಿತ್ತಾ: ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ*
ಪಾಲಿಕೆ ಸದಸ್ಯನ ಬಂಧನ, ಬಿಡುಗಡೆ: ಪೊಲೀಸ್‌ರು ಕ್ರಮ ಕೈಗೊಳ್ಳಲಿದ್ದಾರೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಾಲಿಕೆ ಸದಸ್ಯ ಜವಳಕರ ಬಂಧನ, ಬಿಡುಗಡೆ ಬಗ್ಗೆ ಪೊಲೀಸರ ಹತ್ತಿರ ದಾಖಲಾತಿ ಇವೆ. ಅವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಮಾಡಿರುವ ತಪ್ಪನ್ನು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಬಿಜೆಪಿಗರ ಚಾಳಿಯಾಗಿದೆ. ಅನಾವಶ್ಯಕವಾಗಿ ಬಿಜೆಪಿಯವರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದರು. ರಮೇಶ ಪಾಟೀಲ ಪರವಾಗಿ ಎಂಇಎಸ್ ನವರು ಪ್ರತಿಭಟನೆ ಮಾಡಿದರು. ಕಾನೂನಿನ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಅವರು ಹೇಳಿದ ತಕ್ಷಣ ರಾಜಕೀಯವಾಗುವುದಿಲ್ಲ. ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡುತ್ತದೆ ಎಂದರು.
ನಿಯಮಗಳ ಅನುಸಾರ ಕಾನೂನ ಕ್ರಮ ಆಗಲಿದೆ. ಕೋರ್ಟ್ ಹಾಗೂ ಪೊಲೀಸರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವೈದ್ಯರಿಂದ ವರದಿ ಬಂದ ಬಳಿಕವೇ ಡಿಸ್ಚಾರ್ಜ್ ಮಾಡಲಾಗಿದೆ. ಬಳಿಕ ಬಂಧನ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಬೆಳಗಾವಿಯಲ್ಲಿ ಬಿಹಾರಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಅಭಯ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಅಭಯ ಪಾಟೀಲ ಅವರದ್ದು ಒಂದು ದೊಡ್ಡ ಲಿಸ್ಟ್ ಇದೆ. ದಕ್ಷಿಣ ಕ್ಷೇತ್ರದಲ್ಲಿ ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ವ್ಯಕ್ತಿಯೋರ್ವ ಪೋಟೊ ಪೋಸ್ಟ್ ಹಾಕಿದಾಗ , ಸ್ವತ: ಶಾಸಕರೇ ಅಟ್ರಾಸಿಟಿ ಕೇಸ್ ಹಾಕಿದ್ದರು, ಆಗ ರಾಜಸ್ಥಾನ ಆಗಿತ್ತಾ? ಶಾಸಕ ಅಭಯ ಪಾಟೀಲ ಎಷ್ಟು ಮಂದಿಯನ್ನ ಎಲ್ಲೆಲ್ಲಿ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿ ಹಾರಿದರು.
ಬಿಜೆಪಿಯವರು ವಿನಾಕಾರಣ ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಅವರು ವೈಯಕ್ತಿವಾಗಿ ಜಗಳವಾಡಿದ್ದಾರೆ. ಇದಕ್ಕೂ ಪಾಲಿಕೆ ಸೂಪರ್ ಸೀಡ್ ಗೂ, ಕಾಂಗ್ರೆಸ್‌ಗೂ ಏನೂ ಸಂಬಂಧ ಇಲ್ಲ ಎಂದರು.
ತಿನಿಸು ಕಟ್ಟೆಯಲ್ಲಿ ಪಾಲಿಕೆ ಬಿಜೆಪಿ ಸದಸ್ಯರ ಪತ್ನಿಯ ಹೆಸರಿನ ಮೇಲೆ ಮಳಿಗೆ ಇರುವುದು ತನಿಖೆಯಾಗುತ್ತಿದೆ. ಇಲ್ಲಿ ಮಳಿಗೆ ಒಂದು ಕೋಟಿ ರೂ. ಕಾರ್ ಇದ್ದವರು, ಚಿನ್ನಾಭರಣ ಅಂಗಡಿ ಇದ್ದವರಿಗೆ ಹಂಚಿಕೆಯಾಗಿದೆ. ಸರ್ಕಾರಿ ಸೌಲಭ್ಯ ಇರುವವರು ಇರಬಾರದು ಎಂದು ಕಾನೂನಿನಲ್ಲಿ ಇದೆ. ಆದರೆ ಪಾಲಿಕೆ ಸದಸ್ಯರ ಪತ್ನಿಯ ಹೆಸರಿನಲ್ಲಿ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದಿದ್ದಾರೆ. ಅದನ್ನು ಮರಳಿ ಕೊಡಬೇಕಿತ್ತು. ತನಿಖೆ ವರದಿ ಬರಬೇಕಿದೆ ನೋಡೋಣ ಎಂದರು.
ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಜಾ ಸಲೀಂ, ಸುನೀಲ್ ಹನಮಣ್ಣವರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ