Belagavi NewsBelgaum NewsKannada NewsKarnataka NewsLatestPolitics

*ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ, ಉಪಕರಣಗಳ ಮಂಜೂರಾತಿಗೆ ಕ್ರಮ: ಸಚಿವ ಸತೀಶ್ ಜಾರಕಿಹೊಳಿ ಭರವಸೆ*

ಬಿಮ್ಸ್ ಆಸ್ಪತ್ರೆಗೆ ಉಸ್ತುವಾರಿ ಸಚಿವರ ಭೇಟಿ: ಪ್ರಗತಿ ಪರಿಶೀಲನಾ ಸಭೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ನೇಮಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಅ.10) ನಡೆದ ಬಿಮ್ಸ್ ಶೈಕ್ಷಣಿಕ ಪ್ರಗತಿ, ಆಸ್ಪತ್ರೆ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಇರುವುದರಿಂದ ಸರ್ಕಾರದ ಹಂತದಲ್ಲಿ ಆರೋಗ್ಯ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಜಿಲ್ಲಾಸ್ಪತ್ರೆಗೆ ಸಿಬ್ಬಂದಿಗಳ ಕೊರತೆಯಿದ್ದು, ಶೀಘ್ರ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಅವಶ್ಯಕ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಲಾಗಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಗಡಿ ರಾಜ್ಯಗಳಾದ ಗೋವಾ ಮಹಾರಾಷ್ಟ್ರದಿಂದ ಹೆಚ್ಚಾಗಿ ರೋಗಿಗಳು ಬರುತ್ತಿದ್ದಾರೆ.
ಸಿಬ್ಬಂದಿಗಳ ನೇಮಕದಿಂದ ಜಿಲ್ಲಾ ಆಸ್ಪತ್ರೆಗೆ ಗ್ರಾಮೀಣ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಂದ ಬರುವ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಸರ್ಜನ್ ಡಾ. ಆರ್.ವಿ. ಶಿಂಧೆ ಅವರು ತಿಳಿಸಿದರು.

ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಅಭಿಯಾನದಡಿ ಕೇಂದ್ರ ಸರ್ಕಾರದ ಆದೇಶದಂತೆ ತುರ್ತು ಚಿಕಿತ್ಸೆಗಾಗಿ ಎಂಐಸಿಯು, ಐಸಿಯು ಇತ್ಯಾದಿಗಳ ಮೂಲಭೂತ ಸೌಕರ್ಯಗಳ 50 ಬೆಡ್ ಗಳ ತೀವ್ರ ನಿಗ ಘಟಕ ಪ್ರಾರಂಭಿಸಲು ಅನುಮೋದನೆ ದೊರೆತಿದ್ದು, ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ಹೇಳಿದರು.

ಬಿಮ್ಸ್ ಮತ್ತು ಜಿಲ್ಲಾಸ್ಪತ್ರೆ ಸೇರಿ 1040 ಬೆಡ್ ಗಳನ್ನು ಹೊಂದಿದೆ. ಆದರೆ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತಾಯಿ ಮಕ್ಕಳ ವಿಭಾಗ ಸೇರಿ 3 ಭಾಗಗಳಾಗಿವೆ ಇದರಿಂದ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರೋಗಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು 450 ಬೆಡ್ ಗಳ ಬೋಧನಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಮಂಜೂರಾತಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಮ್ಸ್ ಅಧಿಕಾರಿಗಳು ವಿವರಿಸಿದರು.

100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ. ಅದೇ ರೀತಿಯಲ್ಲಿ ಎಂ.ಆರ್.ಐ, ಸಿಟಿ ಸ್ಕ್ಯಾನ್, ಕ್ಷ – ಕಿರಣ, ಮೈಕ್ರೋ ಬಯಾಲಜಿ ಪ್ರಯೋಗಾಲಯ, ಬಯೋಕೆಮಿಸ್ಟ್ರಿ ಪ್ರಯೋಗಾಲಯ, ಪೆಥಾಲಜಿ ಪ್ರಯೋಗಾಲಯ, ತುರ್ತು ಚಿಕಿತ್ಸಾ ಘಟಕಗಳನ್ನು ಸೇರಿದಂತೆ ನಿರಂತರ 24*7 ಸೇವೆಗಳನ್ನು ಒದಗಿಸಲಾಗುತ್ತಿದೆ.

ಜಲತ್ಯಾಜ್ಯ ಸಂಸ್ಕರಣಾ ಘಟಕ:

ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಘಟಕದ ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಬಿಮ್ಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಅದೇ ರೀತಿಯಲ್ಲಿ ಬಿಮ್ಸ್ ಶೈಕ್ಷಣಿಕ ಸಾಧನೆಗಳು, ಸಂಶೋಧನಾ ಚಟುವಟಿಕೆಗಳು, ವಿಶೇಷ ಸಾಧನೆಗಳು, ಕಟ್ಟಡ ಕಾಮಗಾರಿ ಹಾಗೂ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಕುರಿತು ಸಭೆಯಲ್ಲಿ ಬಿಮ್ಸ್ ಅಧಿಕಾರಿಗಳು ವಿವರಿಸಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಸೈಯೀದಾ ಆಫ್ರಿನ್ ಬಾನು ಬಳ್ಳಾರಿ ಹಾಗೂ ಬಿಮ್ಸ್ ಅಧಿಕಾರಿ ಸಿಬ್ಬಂದಿಗಳು, ಹಾಗೂ ವಿವಿಧ ವಿಭಾಗಗಳ ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕಟ್ಟಡ ಕಾಮಗಾರಿಗಳ ಪರಿಶೀಲನೆ:

ಸಭೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳ ನೂತನ ಕಟ್ಟಡ ಕಾಮಗಾರಿ, ಕ್ಯಾಂಟೀನ್ ಊಟದ ವ್ಯವಸ್ಥೆ, ನರ್ಸಿಂಗ್ ವಿಧ್ಯಾರ್ಥಿಗಳ ಕೊಠಡಿ, ಆಸ್ಪತ್ರೆ ಉದ್ಯಾನವನ ನಿರ್ವಹಣೆ, ಔಷಧಿಗಳ ವಿತರಣೆ ಹಾಗೂ ವಿವಿಧ ವಿಭಾಗಗಳ ವೈದ್ಯಕೀಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬಿಮ್ಸ್ ನಿರ್ದೇಶಕ ಅಶೋಕ ಕುಮಾರ ಶೆಟ್ಟಿ ಸೇರಿದಂತೆ ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button