*ಘಟಪ್ರಭೆ ನದಿಗೆ ಹರಿಸಿದ ನೀರು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ ಸಲಹೆ*

ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಫೆ. 19ರಂದು 2 ಟಿಎಂಸಿ ನೀರು ಹರಿಸಿದ್ದು, ಮತ್ತೆ ಮೇ. 1ರ ನಂತರ ನೀರು ಹರಿಸಲಾಗುವುದು, ಆದರೆ ನೀರು ಪೋಲಾಗದಂತೆ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ, ಸಾರ್ವಜನಿಕರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಸ್ತುತ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದಾಗಿ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ಫೆ. 19ರಂದು ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಬಾಗಲಕೋಟ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ಸರ್ಕಾರದ ಆದೇಶದನ್ವಯ ಕಾಯ್ದಿರಿಸಿದ 5.00 ಟಿ.ಎಂ.ಸಿಯಲ್ಲಿ 2.00 ಟಿ.ಎಂ.ಸಿ ನೀರನ್ನು ಹರಿಸಲು ನಿರ್ದೇಶನ ನೀಡಿತ್ತು.
ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆ ಮೂಲಕ ಕುಡಿಯುವ ಉದ್ದೇಶಕ್ಕಾಗಿ ಕೆರೆ ತುಂಬಿಸಲು 0.07 ಟಿ.ಎಂ.ಸಿ ನೀರನ್ನು ಸೇರಿಸಿ ಒಟ್ಟು 2.07 ಟಿ.ಎಂ.ಸಿ ನೀರನ್ನು ಘಟಪ್ರಭೆ ನದಿಗೆ ನೀರು ಹರಿಸಿದ್ದು, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸದುಪಯೋಗ ಪಡೆದುಕೊಳ್ಳಬೇಕು. ಮತ್ತೆ ಮೇ. 1ನೇ ತಾರೀಖು ನಂತರ ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ