*ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಸ್ಥಳೀಯ ಬಿಜೆಪಿ ನಾಯಕರ ಅಡ್ಡಿ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಘೋಷಿಸಿದ್ದರು. ಆದರೆ ಸ್ಥಳೀಯ ಬಿಜೆಪಿ ನಾಯಕರ ವಿರೋಧದಿಂದ ಅದು ನನೆಗುದಿಗೆ ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ನಾವು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸ್ಥಳೀಯ ನಾಯಕರ ವಿರೋಧದಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಸರ್ಕಾರದಿಂದಲೇ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಕ್ಕೆ ಕನಿಷ್ಠ 300 ನೂರು ಕೋಟಿ ರೂ. ಬೇಕಾಗಬಹುದು, ಹೀಗಾಗಿ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ವರ್ಷಕ್ಕೆ ನೂರು ಕೋಟಿ ರೂ. ಅನುದಾನ ಮೀಸಲಿಟ್ಟು ರಾಜ್ಯ ಸರ್ಕಾರದಿಂದಲೇ ಓವರ್ ಬ್ರಿಡ್ಜ್ ನಿರ್ಮಾಣ ಮಾಡುವುದಾಗಿ ಹೇಳಿದರು.
ಇನ್ನು ನಗರದಲ್ಲಿ ಹೊಸ ಬಡಾವಣೆ ಸರಕಾರದಿಂದ ಮಾಡುವುದು ಕಷ್ಟ. ಖಾಸಗಿಯವರು ಕಾನೂನಾತ್ಮಕವಾಗಿ ಬಡಾವಣೆ ಮಾಡುವವರಿಗೆ ಸಹಕಾರ ಕೊಡುವುದು ಉತ್ತಮ. ಕಳೆದ 10 ವರ್ಷಗಳಿಂದ ಕಣಬರ್ಗಿಯಲ್ಲಿನ ಬಡಾವಣೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ತೆರಿಗೆ ಹೆಚ್ಚಳ ಮಾಡಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಬಿಟ್ಟರೆ ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ. ಬೇರೆ ರಾಜ್ಯದಲ್ಲಿ ನೋಡಿದರೆ ನಮ್ಮ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಕಡಿಮೆ ಇದೆ ಸ್ಪಷ್ಟ ಪಡಿಸಿದರು.
ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಪ್ರಾಥಮಿಕವಾಗಿ ಪೊಲೀಸರು ತನಿಖೆ ನಡೆಸಬೇಕು. ಯಮಕನಮರಡಿ, ಗೋಕಾಕ ಹಾಗೂ ಹುಕ್ಕೇರಿಯಲ್ಲಿ ಸಾಕಷ್ಟು ಜನ ಮೈಕ್ರೋ ಫೈನಾನ್ಸ್ ದವರು ಕಿರುಕುಳ ನೀಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಸಂಬಂಧಿಸಿದವರು ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಮೈಕ್ರೋ ಫೈನಾನ್ಸ್ ಬಗ್ಗೆ ಕಾನೂನು ಜಾರಿಗೆ ತಂದಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ