Belagavi NewsBelgaum NewsKannada NewsKarnataka NewsLatestPolitics

*ಡಾ.ಕೆ. ಸುಧಾಕರ್ ಕಾಂಗ್ರೆಸ್ ಸೇರ್ತಾರಾ?; ಸಚಿವ ಸತೀಶ ಜಾರಕಿಹೊಳಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಅವ್ಯವಹಾರ ಹಾಗೂ 40% ಭ್ರಷ್ಟಾಚಾರದ‌ ಸಮಗ್ರ ತನಿಖೆ ಮಾಡುವುದಕ್ಕೆ ಈಗ ಸಕಾಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಕಾಲದಲ್ಲಿ ವಿರೋಧ ಪಕ್ಷದಲ್ಲಿದ್ದು ನಾವೇ ಕೊರೊನಾದಲ್ಲಿನ‌ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇವು. ಈಗ ನಮ್ಮ ಸರಕಾರವೇ ಅಧಿಕಾರದಲ್ಲಿದೆ. ಈಗ ಆ ತನಿಖೆ ಮಾಡುವುದು ಸೂಕ್ತ. ಸರಕಾರದ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳಿಂದ ತನಿಖೆ ನಡೆಸಿ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ ಕಾಂಗ್ರೆಸ್ ಬರುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸುಧಾಕರ ಅವರು ಕಾಂಗ್ರೆಸ್ ಗೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಕೊರೊನಾ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರದ ಕುರಿತು‌ ತನಿಖೆ ನಡೆಸುವುದು ಖಚಿತ. ಸುಧಾಕರ ಅವರು ಈಗ ಶಾಸಕರಲ್ಲ. ಸರಕಾರ ಬೀಳಿಸುವಷ್ಟು ಅಧಿಕಾರ ಇಲ್ಲ. ಅವರ ಮೇಲೆ ಆರೋಪ‌ ಇದೆ. ಅದು ತನಿಖೆಯಾಗಬೇಕಷ್ಟೆ ಎಂದರು.

ಕಾಂಗ್ರೆಸ್ ಸರಕಾರ ಬಂದು 100 ದಿನ ಕಳೆದಿದೆ. ಸರಕಾರದ ಸಾಧನೆ ಬಗ್ಗೆ ತಿಳಿದುಕೊಳ್ಳಲು ಸುಮಾರು 6 ತಿಂಗಳು ಕಾಲಾವಕಾಶಬೇಕು. ಈ ಮೂರು ತಿಂಗಳಲ್ಲಿ ನಾವು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಹಂತ ಹಂತವಾಗಿ ಎಲ್ಲ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿಕೊಂಡಿದೆ. ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಗೆ ಜಾರಕಿಹೊಳಿ ಕುಟುಂಬದ ಸದಸ್ಯರು ಸ್ಪರ್ಧೆ ನಡೆಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕಂತೂ ಅದು ನಮ್ಮ ಮುಂದೆ ಇಲ್ಲ. ಮುಂದೆ ನೋಡೋಣ ಎಂದರು.

ನೈತಿಕ ಪೊಲೀಸಗಿರಿಗೆ ಬೆಳಗಾವಿ ಹಾಗೂ ರಾಜ್ಯದಲ್ಲಿ ಆಸ್ಪದ ನೀಡುವುದಿಲ್ಲ. ಅದು ಮುಗಿದು‌ ಹೋದ ಅಧ್ಯಾಯ. ಒಂದು ವೇಳೆ ನಡೆದಿದ್ದರೆ ಅಂಥವರ‌ ವಿರುದ್ಧ ಪೊಲೀಸರು ಕ್ರಮ ಕೈಕೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಮಧ್ಯೆ ಕೋಲ್ಡ್ ವಾರ್ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button