*ಅನುದಾನ ಲಭ್ಯತೆ ಆಧರಿಸಿ ರಸ್ತೆ ಸುಧಾರಣೆಗೆ ಕ್ರಮ: ಸಚಿವ ಸತೀಶ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ರಸ್ತೆ ಸುಧಾರಣೆ ಕಾರ್ಯವನ್ನು ಅನುದಾನ ಲಭ್ಯತೆ ಆಧರಿಸಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ವಿಧಾನ ಪರಿಷತನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಸದಸ್ಯರಾದ ಎಸ್.ವಿ.ಸಂಕನೂರ ಮತ್ತು ಎನ್ ರವಿಕುಮಾರ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಆಯ್ದ ಭಾಗಗಳಲ್ಲಿ ಭಾಗಶಃ ಹಾನಿಯುಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಖಾನಾಪುರದಿಂದ ನಂದಗಡ ಮುಖಾಂತರ ಹೋಗುವ ಹಳಿಯಾಳ ರಸ್ತೆಯ ಆಯ್ದ ಭಾಗಗಳಲ್ಲಿ ಆಗಿರುವ ಹಾನಿಗೆ 2023-24ನೇ ಸಾಲಿನ ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣೆ ಆಡಿ ಬಿಡುಗಡೆಯಾದ ಅನುದಾನದಲ್ಲಿ 22 ಕಿಮಿ ರಸ್ತೆಯನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಗದಗ- ಲಕ್ಷ್ಮೇಶ್ವರ ಸವಣೂರ ರಸ್ತೆ ಸರಿಪಡಿಸಲು ಜಂಟಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಲೋಕೋಪಯೋಗಿ ಸಚಿವ ಜಾರಕಿಹೊಳಿ ಹೇಳಿದರು. ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ 5ರ ಭಾಗವಾಗಿರುವ ಗದಗ-ಲಕ್ಷ್ಮೀಶ್ವರ ಸವಣೂರ ರಸ್ತೆಯನ್ನು ಸಂಪೂರ್ಣವಾಗಿ ಸರಿಪಡಿಸಬೇಕು ಎನ್ನುವ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗದಗ- ಲಕ್ಷ್ಮೇಶ್ವರ ಸವಣೂರ ರಸ್ತೆ ಸುಧಾರಣೆಯನ್ನು ಕೆಆರ್‌ಡಿಸಿಎಲ್, ಕೆಷಿಪ್ ಸೇರಿದಂತೆ ವಿವಿಧ ಲೆಕ್ಕಶೀರ್ಷಿಕೆಗಳಡಿಯಲ್ಲಿ ನಿರ್ವಹಣೆ ಮಾಡಲಾಗಿದೆ. ರಸ್ತೆ ಸುಧಾರಣೆ ಹಿನ್ನೆಲೆಯಲ್ಲಿ ಸದಸ್ಯರೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ