ಶನಿವಾರ ಬೆಳಗ್ಗೆ 9 ಗಂಟೆಗೆ ಜಾಥಾ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಶನಿವಾರ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಜಾಥಾ ಮತ್ತು ಪ್ರತಿಭಟನೆ ಸಭೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪೂರ್ವಭಾವಿ ಸಭೆ ನಡೆಯಲಿದೆ.
ಬುಧವಾರ ನಗರದ ಹುಕ್ಕೇರಿ ಮಠದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು. ಗುರುವಾರ ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಜನಪ್ರತಿನಿಧಿಗಳು, ಮಠಾಧೀಶರು, ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಸಂಘಸಂಸ್ಥೆಗಳ ಪದಾಧಿಕಾರಿಗಳು ಸ್ವಯಂಪ್ರೇರಣೆಯಿಂದ ಸಭೆಗೆ ಆಗಮಿಸಿ 16ರಂದು ನಡೆಯಲಿರುವ ಜಾಥಾ ಹಾಗೂ ಪ್ರತಿಭಟನಾ ಸಭೆ ಕುರಿತು ಸಲಹೆ ಸೂಚನೆ ನೀಡಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಕೋರಿದರು.
ನಾಗನೂರು ಮಠದ ಸಿದ್ದರಾಮ ಸ್ವಾಮಿಗಳು, ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ಕನ್ನಡ ಸಂಘಟನೆಗಳ ಪ್ರಮುಖರು, ಮಹಿಳಾ ಸಂಘಟನೆಗಳ ಪ್ರಮುಖರು, ಉದ್ಯಮ ಕ್ಷೇತ್ರದ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕ, ಸಾರಿಗೆ ಕ್ಷೇತ್ರದ ಸಂಘಟನೆಗಳು, ಧಾರ್ಮಿಕ ಸಂಘಟನೆಗಳ ಪ್ರಮುಖರು, ವಿವಿಧ ನಾಗರಿಕ ಸಂಘಟನೆಗಳು, ರಹವಾಸಿ ಸಂಘಗಳ ಪದಾಧಿಕಾರಿಗಳು ಹೀಗೆ ನಗರ ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಸಂಘಟನೆಗಳ ಪ್ರಮುಖರೂ ಸ್ವಯಂ ಪ್ರೇರಣೆಯಿಂದ ಆಗಮಿಸಲು ಕೋರಲಾಗಿದೆ.
ಬುಧವಾರದ ಸಭೆಯಲ್ಲಿ ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ, ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ರೋಹನ್ ಜುವಳಿ, ಪತ್ರಕರ್ತ ಎಂ.ಕೆ.ಹೆಗಡೆ, ಕರ್ನಾಟಕ ನವನಿರ್ಮಾಣ ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ್, ಆರ್ ಸಿಯು ಸೆನೆಟ್ ಸದಸ್ಯ ರಾಜು ಚಿಕ್ಕನಗೌಡರ್, ಉದ್ಯಮಿ ಪಾಂಡುರಂಗ ರಡ್ಡಿ, ಕನ್ನಡ ಸಂಘಟನೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಶನಿವಾರ ಬೆಳಗ್ಗೆ 9 ಗಂಟೆಗೆ ಜಾಥಾ:
ಶನಿವಾರ ಬೆಳಗ್ಗೆ 9 ಗಂಟೆಗೆ ಬೋಗಾರ್ ವೇಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯುವುದು. ಸಚಿವರು, ಸಂಸದರು, ಶಾಸಕರು ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳು, ಮಠಾಧೀಶರು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಎಲ್ಲ ನಾಗರಿಕರು ಸ್ವಯಂ ಪ್ರೇರಣೆಯಿಂದ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.