ಪೊಲೀಸರ ವಿರುದ್ಧವೇ ಸತೀಶ ಜಾರಕಿಹೊಳಿ ಕಂಪ್ಲೇಂಟ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಮಾಜಿ ಸಚಿವ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಗೋಕಾಕ ಪೊಲೀಸರ ವಿರುದ್ಧ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.
ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಯಾವುದಾದರು ಸಣ್ಣ ಘಟನೆ ನಡೆದರೂ ಕಾಂಗ್ರೆಸ್ ಕಾರ್ಯಕರ್ತರನ್ನೇ ಟಾರ್ಗಟ್ ಮಾಡಿ ಹಿಂಸಿಸುತ್ತಿದ್ದಾರೆ ಎಂದು ದೂರಿದ್ದಾರೆ. ಇಂತಹ ಆರೋಪ ಬಂದಾಗ ಹೊರಗಿನ ಪೊಲೀಸರನ್ನು ಕಳುಹಿಸಿ ತನಿಖೆ ನಡೆಸುವಂತೆ ಅವರು ಎಸ್ಪಿಗೆ ಮನವಿ ಮಾಡಿದ್ದಾರೆ.
ಇಷ್ಟಕ್ಕೂ ಸತೀಶ್ ಸಿಟ್ಟಿರುವುದು ಸಹೋದರ ರಮೇಶ್ ಜಾರಕಿಹೊಳಿ ಮೇಲೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಬಾಗಿಲಲ್ಲಿ ನಿಂತಿರುವ ರಮೇಶ್ ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ ತಮ್ಮೊಂದಿಗೆ ಸಹಕರಿಸದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರನ್ನು ಬಿಡುತ್ತಾರೆನ್ನುವ ಸಂಶಯ ಸತೀಶ್ ಗೆ ಬಂದಂತಿದೆ. ಹಾಗಾಗಿಯೇ ಪೊಲೀಸರ ವಿರುದ್ಧ ದೂರು ಸಲ್ಲಿಸಿದ್ದಾರೆ.
ಒಟ್ಟಾರೆ, ಅಣ್ಣ, ತಮ್ಮರ ಜಗಳ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದೆ. ಇದು ಕಾರ್ಯಕರ್ತರು, ಅಧಿಕಾರಿಗಳನ್ನು ಹೈರಾಣಾಗಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ