Belagavi NewsBelgaum NewsKannada NewsKarnataka NewsLatestPolitics

*ಸತೀಶ್‌ ಪ್ರತಿಭಾ ಪುರಸ್ಕಾರ ಆರಂಭ: ಸಚಿವ ಸತೀಶ್‌ ಜಾರಕಿಹೊಳಿ*

ಸೋತ ಮಕ್ಕಳು ಚಿಂತಿಸಬೇಡಿ, ಮತ್ತೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದ ಸಚಿವರು

ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ಸತೀಶ್‌ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಗೆದ್ದಿರಬಹುದು, ಕೆಲವರು ಸೋತಿರಬಹುದು. ಆದರೆ ಸೋತ ಮಕ್ಕಳು ಚಿಂತಿಸುವ ಅವಶ್ಯಕತೆ ಇಲ್ಲ. ಮುಂದಿನ ವರ್ಷ ಮತ್ತೆ ನಿಮಗೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಎನ್‌ಎಸ್‌ಎಫ್ ಶಾಲಾ ಆವರಣದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

10ನೇ ಸತೀಶ್‌ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳೆದ ಎರಡು ದಿನಗಳಿಂದ ಯಮಕನಮರಡಿಯಲ್ಲಿ ಅದ್ದೂರಿಯಾಗಿ ಜರುಗಿದ್ದು, ಅತ್ಯಂತ ಯಶಸ್ಸು ಕಂಡಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್‌ ಕಾರಣದಿಂದ ಸತೀಶ್‌ ಪುರಸ್ಕಾರ ಕಾರ್ಯಕ್ರಮ ಸ್ಥಗಿತಗೊಳಿಸಿದ್ದೆ, ನಿಮ್ಮೆಲ್ಲರ ಪ್ರೀತಿ, ಆಶಯಯಿಂದ ಮತ್ತೆ ಈ ಕಾರ್ಯಕ್ರಮ ಆರಂಭವಾಗಿದೆ ಎಂದರು.

ಸತೀಶ್‌ ಪ್ರತಿಭಾ ಪುರಸ್ಕಾರ ವೇದಿಕೆ ಮೂಲಕ ಅನೇಕ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಿದ್ದು, ಬಹಳ ಸಂತೋಷದ ವಿಷಯ. ಹತ್ತು ವರ್ಷಗಳ ಹಿಂದೆ ಈ ಬೀಜವನ್ನು ನೆಡುವ ಪ್ರಯತ್ನ ಮಾಡಿದ್ದಿವಿ. ಕಾರಣ ಈ ಬೀಜ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಇದರ ಫಲ ಹುಕ್ಕೇರಿ ತಾಲೂಕು, ಬೆಳಗಾವಿ ಜಿಲ್ಲೆ, ರಾಜ್ಯಕ್ಕೆ ಹೋಗುತ್ತದೆ ಎಂಬ ವಿಶ್ವಾಸ ಇದೆ. ಸತೀಶ್‌ ಪುರಸ್ಕಾರ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಹಾರೈಸಿದರು.

ರಿಯಾಜ್‌ ಚೌಗಲಾ, ಕಿರಣ ರಜಪೂತ, ರವಿ ಜಿಂಡ್ರಾಳೆ ಕಾರ್ಯಕ್ರಮ ಸಂಘಟಿಸಿದ್ದು, ನಿಮ್ಮ ಮಕ್ಕಳ ಪ್ರಗತಿಗೆ, ನಿಮಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕೆಂದರು.

ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಸಮಾಜದಲ್ಲಿ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿಯವರೇ ಸಾಕ್ಷಿ. ಅವರ ಸಮಾಜಮುಖಿ ಕಾರ್ಯ ವೈಖರಿಯಿಂದ ಯಮಕನಮರಡಿ ಕ್ಷೇತ್ರದ ಮಕ್ಕಳು, ಯುವಕರು ಈ ನಾಡಿನ ಸಾಹಿತ್ಯ, ಸಂಸ್ಕೃತಿ ಉಳಿಸಿ, ಬೆಳೆಸುತ್ತಿದ್ದಾರೆ. ಅವರು ಯಾವುದೇ ಕಾರ್ಯ ಕೈಗೊಂಡರು ಅಚ್ಚುಕಟ್ಟಾಗಿ ಮಾಡುತ್ತಿದ್ದು, ದೇವರು ಅವರಿಗೆ ಓಳ್ಳೆಯ ಆಯುಷ್ಯ, ಆರೋಗ್ಯ ನೀಡಲೆಂದು ಹರಿಸಿದರು.

ಹತ್ತರಗಿಯ ಹರಿ ಮಂದಿರದ ಆನಂದ ಮಹಾರಾಜ ಗೋಸಾವಿ ಮಾತನಾಡಿ, ಸತೀಶ್ ಪ್ರತಿಭಾ ಪುರಸ್ಕಾರ ನೋಡಿ ಸಂತೋಷ ಆಗುತ್ತಿದೆ. ಕಲೆಗಳನ್ನು ಗೌರವಿಸಿ, ಕಲಾವಿದರನ್ನು ಪೋಷಿಸುವ ಕೆಲಸ ಮಾಡುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಕಾರ್ಯ ನಿಜಕ್ಕೂ ಶಾಘ್ಲನೀಯ ಎಂದರು.

ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದ ಮಕ್ಕಳ ಜೀವನಾಡಿ. ಜಾನಪದ ಕಲೆಗಳು ನಶಿಸಿ ಹೋಗುವ ಕಾಲದಲ್ಲಿ ಜನಪದ ಕಲೆಯನ್ನು ಉಳಿಸಿ, ಬೆಳೆಸುತ್ತಿರುವ ಕಾರ್ಯಕ್ಕೆ ಸಚಿವ ಸತೀಶ್ ಆದ್ಯತೆ ನೀಡುತ್ತಿದ್ದಾರೆ. ಪಾಲಕರು ಕನ್ನಡ ಉಳಿವಿಗಾಗಿ ಆದ್ಯತೆ ನೀಡಬೇಕು. ಸ್ವದೇಶಿ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.

ಊಟ-ಉಪಹಾರ ಪರಿಶೀಲಿಸಿದ ಸಚಿವರು:

10ನೇ ಸತೀಶ್‌ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವ್ಯವಸ್ಥೆ ಮಾಡಿದ ಊಟ-ಉಪಹಾರವನ್ನು ಸ್ವತಃ ಸಚಿವ ಸತೀಶ್‌ ಜಾರಕಿಹೊಳಿ ಅವರು ಪರಿಶೀಲಿಸಿದರು. ಕಾರ್ಯಕ್ರಮ ನಡೆಯುತ್ತಿರುವಗಲೇ ಸ್ವತಃ ವಿದ್ಯಾರ್ಥಿಗಳು ಊಟ ಮಾಡುತ್ತಿರು ಸ್ಥಳಕ್ಕೆ ಭೇಟಿ ನೀಡಿ ತಿಂಡಿ ಪದಾರ್ಥಗಳನ್ನು ಪರಿಶೀಲಿಸಿದರು. ಸಚಿವರನ್ನು ಕಂಡ ವಿದ್ಯಾರ್ಥಿಗಳು ತಮಗೆ ನೀಡಿದ ಬಹುಮಾನ ಪತ್ರಗಳನ್ನು ಹಿಡಿದು ಪೋಟೋ, ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಮಕ್ಕಳ ಮೇಲಿರುವ ಸಚಿವರ ಪ್ರೀತಿ, ಕಾಳಜಿಯನ್ನು ನೋಡಿ ಸ್ಥಳದಲ್ಲಿದ್ದ ಶಿಕ್ಷಕರು ಸಂತಸಗೊಂಡರು.

ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ಇದೇ ವೇಳೆ ಹುಕ್ಕೇರಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಯುವ ಸಾಧಕರನ್ನು ಶ್ರೀಗಳು, ಗಣ್ಯರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಗಣೇಶ ಹುಕ್ಕೇರಿ, ರಾಜು (ಆಸೀಫ್‌) ಸೇಠ್‌, ವಿಶ್ವಾಸ ವೈದ್ಯ, ಬಾಬಾ ಸಾಹೇಬ್‌ ಪಾಟೀಲ್‌, ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಬಿಇಒ ಪ್ರತಿಭಾ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಮಹಾವೀರ್‌ ಮೋಹಿತೆ, ಅರುಣ ಕಟಾಂಬಳೆ, ಕಿರಣ ರಜಪೂತ, ಮಹಾಂತೇಶ ಮಗದುಮ್, ಸತೀಶ್ ಜಾರಕಿಹೊಳ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಚೌಗಲಾ, ದಯಾನಂದ ಪಾಟೀಲ, ಶಶಿ ಹಟ್ಟಿ, ಮಹಾದೇವ ಪಟೋಳಿ, ಈರಣ್ಣಾ ಬಿಸಿರೊಟ್ಟಿ, ಆ‌ರ್. ಜಿಂಡ್ರಾಳಿ, ದಸ್ತಗೀರ ಬಸಾಪೂರಿ, ಎಸ್.ಎ. ಅತ್ಯಾಳಿ ಸೇರಿದಂತೆ ಜಿಪಂ, ತಾಪಂ ಮಾಜಿ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಶಿಕ್ಷಕರು, ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button