Kannada NewsLatestUncategorized

*ಸವದತ್ತಿಗೆ ಗೋಶಾಲೆ: ಪ್ರಭು ಚವ್ಹಾಣ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಶೀಘ್ರದಲ್ಲೇ ಸರ್ಕಾರಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಘೋಷಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚರ್ಮಗಂಟು ರೋಗಪೀಡಿತ ಜಾನುವಾರುಗಳನ್ನು ಪರಿಶೀಲನೆ ನಡೆಸಿದಾಗ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಗೋಶಾಲೆ ನಿರ್ಮಿಸುವಂತೆ ರೈತರು ಮಾಡಿದ ಮನವಿಗೆ ಘೋಷಿಸಿದರು.

ಈ ಭಾಗದ ರೈತರು ತಮ್ಮ ದೇವರಿಗೆ ಹರಕೆ ಹೊತ್ತು ತಂದುಬಿಡುವ ಜಾನುವಾರುಗಳನ್ನು ರಕ್ಷಣೆ, ಪಾಲನೆ ಮತ್ತು ಪೋಷಣೆಗಾಗಿ ಹಾಗೂ ಯಲ್ಲಮ್ಮನ ಗುಡ್ಡದಲ್ಲಿ ದನಗಳ ಜಾತ್ರೆ ನಡೆಯುವುದನ್ನು ಗಮನದಲ್ಲಿಟ್ಟುಕೊಂಡು ಸವದತ್ತಿಯಲ್ಲಿ ಸರ್ಕಾರದ ವತಿಯಿಂದಲೇ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದರು.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲಾ ಆಡಳಿತದೊಂದಿಗೆ ಈ ಬಗ್ಗೆ ಸಮನ್ವಯ ಸಾಧಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪ ನಿರ್ದೇಶಕ ಡಾ.ರಾಜು ಕುಲೇರ್ ಅವರಿಗೆ ಸೂಚನೆ ನೀಡಿದರು.

ಹತೋಟಿಯಲ್ಲಿದೆ ಚರ್ಮಗಂಟು:
ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹತೋಟಿಯಲ್ಲಿದೆ. ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿದೆ‌. ನಮ್ಮಲ್ಲಿ ರೋಗ ಕಡಿಮೆಯಾಗುತ್ತಿದೆ. ಸರ್ಕಾರ ಸದಾ ನಿಮ್ಮೊಂದಿಗಿದೆ. ಈ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಪ್ರಭು ಚವ್ಹಾಣ್ ಅಭಯ ನೀಡಿದರು.

ಚರ್ಮಗಂಟು ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸಲು ಭರಿಸಲಾಗುತ್ತಿದೆ. ಚರ್ಮಗಂಟು ರೋಗವನ್ನು ಹತೋಟಿ ತರಲಾಗುತ್ತಿದೆ. ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಜಾನುವಾರುಗಳ ಮಾಲೀಕರುಗಳಿಗೆ ಪರಿಹಾರವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಚಿಕಿತ್ಸೆ ಮತ್ತು ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ 13 ಲಕ್ಷ ರಾಸುಗಳಿಗೆ ಲಸಿಕೆ ನೀಡಲಾಗಿದೆ. ಒಂದು ಲಕ್ಷ ಡೋಸ್ ಲಸಿಕೆ ಸಂಗ್ರಹಣೆಯಲ್ಲಿದೆ. ರೈತರಲ್ಲಿ ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ.‌ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದ ತಕ್ಷಣ ಗೋಪ್ರೇಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ವಹಿಸಿ ತಕ್ಷಣವೇ ಪರಿಹಾರ ಧನ ವಿತರಣೆ ಮಾಡಲಾಗಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.

ಪಶುವೈದ್ಯರಿಗೆ ತರಾಟೆ: ಪಶುಸಂಗೋಪನೆ ಇಲಾಖೆಯಿಂದ ಕೈಗೊಂಡ ಔಷಧೋಪಚಾರ, ಚಿಕಿತ್ಸೆ ಮತ್ತು ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದು,

ರೈತರಿಂದ ಜಾನುವಾರುಗಳ ಆರೋಗ್ಯ ಸಮಸ್ಯೆ ಕುರಿತು ಕರೆ ಬಂದ ತಕ್ಷಣ ಕೂಡಲೇ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಪಶು ಸಂಜೀವಿನಿ ಆ್ಯಂಬುಲೆನ್ಸ್ ವಾಹನದಲ್ಲಿ ತೆರಳಿ ತುರ್ತು ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಪಶು ವೈದ್ಯಾಧಿಕಾರಿಗಳ ಮೊಬೈಲ್ ಸ್ವೀಚ್ಡ್ ಆಫ್ ಆಗದಂತೆ ಜಾಗೃತೆ ವಹಿಸಬೇಕು. ರೈತರಿಂದ ದೂರು ಬರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೇ ನಿಮ್ಮನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಸಚಿವ ಪ್ರಭು ಚವ್ಜಾಣ್ ತರಾಟೆ ತೆಗೆದುಕೊಂಡರು.

ರೈತರು ಆತಂಕಕ್ಕೆ ಒಳಗಾಗದೇ1962ಗೆ ಕರೆ ಮಾಡಿದರೆ ನಮ್ಮ ಪಶುವೈದ್ಯಕೀಯ ಸಿಬ್ಬಂದಿಗಳು ಸ್ಥಳಕ್ಕೆ ಪಶು ಸಂಜೀವಿನಿ ಆಂಬ್ಯುಲೆನ್ಸ್.ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ. ಪಶುಸಂಜೀವಿನಿ ಆ್ಯಂಬುಲೆನ್ಸ್ ಅನ್ನು ರೈತರು ಸದುಪಯೋಗಪಡಿಸಿಕೊಂಡು ಜಾನುವಾರುಗಳ ರಕ್ಷಣೆಗಾಗಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಸಚಿವ ಪ್ರಭು ಚವ್ಹಾಣ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆ ಉಪ ನಿರ್ದೇಶಕ ಡಾ.ರಾಜು ಕುಲೇರ್, ಸವದತ್ತಿ ಸಹಾಯಕ ನಿರ್ದೇಶಕ ಡಾ.ಅನೀಲ್ ಮರ್ಲಿಂಗಣ್ಣ, ಯರಗಟ್ಟಿ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಎಂ.ವಿ.ಪಾಟೀಲ್ ಸ್ಥಳೀಯರಾದ ವಿರೂಪಾಕ್ಷಪ್ಪ ಮಾಮನಿ ಸೇರಿದಂತೆ ಹಲವರಿದ್ದರು. ಸವದತ್ತಿ ರೈತ ರಮೇಶ್ ತುಪ್ಪದ್ ಅವರ ಜಾನುವಾರುಗಳನ್ನು ಪರಿಶೀಲಿಸಿ, ಅವರ ನಿವಾಸಕ್ಕೆ ಭೇಟಿ ನೀಡಿದರು.

ಆನಂದ್ ಮಾಮನಿ ನಿವಾಸಕ್ಕೆ ಭೇಟಿ:
ಸವದತ್ತಿಯಲ್ಲಿರುವ ಇತ್ತಿಚೆಗೆ ನಿಧನರಾದ ವಿಧಾನಸಭೆ ಉಪಸಭಾಧ್ಯಕ್ಷರಾದ ವಿಶ್ವನಾಥ್ ಆನಂದ್ ಚಂದ್ರಶೇಖರ್ ಮಾಮನಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಅವರ ತಾಯಿ ಗಂಗಮ್ಮ ಚಂದ್ರಶೇಖರ್ ಮಾಮನಿ, ಪತ್ನಿ ರತ್ನಕ್ಕ ಆನಂದ್ ಮಾಮನಿ ಅವರಿದ್ದರು.

*ಒಂದು ದಿನ ಮೊದಲೇ ಚಳಿಗಾಲದ ಅಧಿವೇಶನ ಮುಕ್ತಾಯ?*

https://pragati.taskdun.com/belagaviwinter-sessiondecember-29th/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button