ಪ್ರಗತಿವಾಹಿನಿ ಸುದ್ದಿ, ಶಿರಸಿ: ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪಲ್ಟಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಿಬ್ಬಂದಿ ಕಸ್ತೂರಮ್ಮ ( 61) ಮೃತಪಟ್ಟವರು.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪರಿಣಿತಿ ವಿದ್ಯಾಮಂದಿರ ಶಾಲೆಯ ಮಕ್ಕಳನ್ನು ಶಿರಸಿ ಕಡೆಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿತ್ತು.
ಹಾವೇರಿ – ಶಿರಸಿ ರಸ್ತೆಯ ಬುಗಡಿಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲ ಮಕ್ಕಳು ಸೇರಿದಂತೆ 15 ಜನ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಶಿರಸಿಯ ಆಸ್ಪತ್ರೆಗೆ ದಾಖಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಟ್ಯಾಂಕರ್ ಗೆ ಸ್ಕೂಲ್ ಬಸ್ ಡಿಕ್ಕಿ:14 ಜನರಿಗೆ ಗಾಯ*
ಯಲ್ಲಾಪುರ: ಟ್ಯಾಂಕರ್ ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು 14 ಜನರು ಗಾಯಗೊಂಡ ಘಟನೆ ಉ.ಕ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಮೂರು ಬಸ್ ಗಳಲ್ಲಿ ಅಗಸೂರಿಗೆ ತರಬೇತಿಗೆಂದು ಹೊರಟಿದ್ದರು.
ಅರಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ ಇನ್ನೊಂದು ಟ್ಯಾಂಕರ್ ನಿಂತಿದ್ದು, ಅದಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಚಾಲಕ ಹಾಗೂ ಬಸ್ ನಲ್ಲಿದ್ದ 13 ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿಂದಿನ ಬಸ್ ಗಳಲ್ಲಿ ವಿದ್ಯಾರ್ಥಿಗಳಿದ್ದು, ಅವರೆಲ್ಲ ಸುರಕ್ಷಿತವಾಗಿದ್ದಾರೆ.
ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ