ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಜಗತ್ತಿನ ಅರಿಯುವಿಕೆಯ ಮೂಲವೇ ವಿಜ್ಞಾನ. ಮಾನವನ ಸಮಸ್ಯೆ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುವುದೇ ವಿಜ್ಞಾನವಾಗಿದೆ. ವಿಜ್ಞಾನದ ಕೂಸು ತಂತ್ರಜ್ಞಾನ. ತಂತ್ರಜ್ಞಾನವಿಲ್ಲದೇ ಇಂದು ಬದುಕುವುದು ಕಷ್ಟ. ಮನುಷ್ಯರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ (ವಾಲ್ಮಿ) ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು.
ಅವರು ಕೌಜಲಗಿಯ ಸಿಂಧೂತಾಯಿ ಮಹಾದೇವರಾವ್ ದಳವಾಯಿ ಎಜ್ಯುಕೇಶನ್ ಟ್ರಸ್ಟ್ ಹಾಗೂ ಬೆಂಗಳೂರಿನ ಕೆ.ಸಿ.ರೆಡ್ಡಿ ಸರೋಜಮ್ಮಾ ವೆಲ್‌ವೇರ್ ಫೌಂಡೇಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಎಂ.ಎಂ. ದಳವಾಯಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯನ್ನು ರಕ್ಷಿಸಿದರೆ ಮನುಷ್ಯ ಬದುಕುತ್ತಾನೆ. ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ಸದಾ ಸಾವಿರಾರು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ದೇಶದ ಬಡತನವನ್ನು ಹೋಗಲಾಡಿಸಿ ಅನ್ನ-ನೀರು, ಬಟ್ಟೆ, ವಸತಿ ಸೌಕರ್ಯಗಳನ್ನು ಇಂದಿನ ತಂತ್ರಜ್ಞಾನದಿಂದ ಪೂರೈಸಿಕೊಳ್ಳಲಾಗಿದೆ. ಹಳ್ಳಿಗಳಿಂದ ಕೂಡಿದ ಭಾರತ ಬಡತನ ನೀಗಿಸಲು ಕೃಷಿ ವಿಜ್ಞಾನ ನೆರವಾಯಿತು. ವಿಜ್ಞಾನವಿಲ್ಲದೆ ಹೋಗಿದ್ದರೆ ಇಂದಿಗೂ ಮಾನವ ಆದಿಕಾಲದಂತೆಯೇ ಇರಬೇಕಾಗುತ್ತಿತ್ತು.
ವಿಜ್ಞಾನ-ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕೆ ಬಳಸಿಕೊಳ್ಳಬೇಕು. ಇದರಿಂದ ಒಳಿತು-ಕೆಡಕುಗಳಿವೆ. ಒಳಿತಿಗೆ ಒತ್ತು ನೀಡಬೇಕು. ವಿಜ್ಞಾನದ ಒಳಿತನ್ನು ಆಯ್ಕೆ ಮಾಡಿಕೊಳ್ಳುವುದೇ ವೈಜ್ಞಾನಿಕ, ವೈಚಾರಿಕ ಮನೋಭಾವನೆಯಾಗಿದೆ ಎಂದು ಹೇಳುತ್ತ, ಕುವೆಂಪು ಅವರ ಸಾಂದರ್ಭಿಕ ಮೂಢನಂಬಿಕೆ ಹೊಂದಿದ್ದರೆ ವಿಜ್ಞಾನ ಹೊತ್ತ ಕತ್ತೆಗಳಂತೆ ಎಂಬ ಮಾತನ್ನು ಸೂಚ್ಯವಾಗಿ ಹೇಳಿ, ಮೂಢನಂಬಿಕೆಗಳನ್ನು ಹೊಂದಬಾರದು, ದೇವರ, ದೆವ್ವದ ಹೆಸರಿನಿಂದ ಮುಗ್ದ ಜನರಿಗೆ ಮೂಢನಂಬಿಕೆ ಹುಟ್ಟಿಸುವವರನ್ನು ವೈಜ್ಞಾನಿಕವಾಗಿ ಪವಾಡಗಳನ್ನು ಬಯಲು ಮಾಡಿ ಇವರ ಮೋಸತನವನ್ನು ಬೀದಿಗೆ ಎಳೆಯಬೇಕು.
ಇಂದಿನ ಯುವ ಜನತೆ ಮಾಜಿ ರಾಷ್ಟ್ರಪತಿ ಕೆ.ಪಿ.ಜೆ ಅಬ್ದುಲ್ ಕಲಾಮರಂತೆ ವಿಜ್ಞಾನಿಯಾಗಿ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದರು. ನಿಸರ್ಗ ಮನುಷ್ಯನಿಗೆ ಕ್ರಿಯಾಶೀಲ ಶಕ್ತಿತ್ವ ತುಂಬಿದೆ ಆದ್ದರಿಂದ ಇಂದಿನ ವಿದ್ಯಾರ್ಥಿಗಳು ನಿಸರ್ಗದ ಬೆಳವನಿಗೆಯತ್ತ ಗಮನ ಹರಿಸಬೇಕೆಂದರು.
ಕಾರ್ಯಕ್ರಮದ ಸಂಯೋಜಕಿ, ಬೆಂಗಳೂರಿನ ಕೆ.ಸಿ.ರೆಡ್ಡಿ ಸರೋಜಮ್ಮಾ ವೆಲ್‌ಫೇರ್ ಫೌಂಡೇಷನ್‌ನ ಕಾರ್ಯದರ್ಶಿ ಪ್ರೊ. ವಸಂತಾಕವಿತಾ ರೆಡ್ಡಿ ಮಾತನಾಡಿ, ವಿಜ್ಞಾನದ ಮಹತ್ವ ಕುರಿತು ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಸಂಸ್ಥೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸುತ್ತ ಪ್ರತಿಯೊಂದು ಮಗು ನನ್ನ-ನಮ್ಮ ಮಗು; ಪ್ರಕೃತಿ ನನ್ನದು-ನಮ್ಮದು ಎಂದು ಭಾವಿಸಬೇಕೆಂದು ಹೇಳಿದರು.
ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ನಾಗೇಶ ನಾಯ್ಕ ಮಾತನಾಡಿ, ವಿಜ್ಞಾನ ಮನುಷ್ಯನಲ್ಲಿ ಹಾಸುಹೊಕ್ಕಾಗಿದೆ. ಭಾರತದ ಸುಮಾರು ೭೫ ಕೋಟಿಯಷ್ಟಿರುವ ಯುವ ಸಮುದಾಯ ವಿಜ್ಞಾನ ವಿಷಯದಲ್ಲಿ ಆಸಕ್ತಿ ತೋರಿ ಸಂಶೋಧನೆಗಳನ್ನು ಮಾಡಬೇಕೆಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳನ್ನು ನಡೆಸುವುದು ಕಷ್ಟ ದಳವಾಯಿ ಕುಟುಂಬವು ಸರಕಾರದ ಯಾವುದೆ ಅನುದಾನವಿಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಅರವಿಂದ ದಳವಾಯಿ ಸಮಾಜ ಸೇವೆ ಮಾಡಲು ಸರಕಾರಿ ನೌಕರಿ ಬಿಟ್ಟು ರಾಜಕಾರಣಿಯಾಗಿ ಜನ ಸೇವೆ ಮಾಡುತ್ತಿದ್ದಾರೆ. ಇವರಿಗೆ ಇನ್ನು ಹೆಚ್ಚು ಜನ ಸೇವೆ ಮಾಡಲು ಸುತ್ತಲಿನ ಗ್ರಾಮದವರು ಸಹಕಾರ ನೀಡಬೇಕೆಂದರು.
.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಧರ್ಮದರ್ಶಿ ಹಾಗೂ ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ ಭಾರತ ಸ್ವಾತಂತ್ರ್ಯಾನಂತರ ಬೀಕರ ಬರಗಾಲದಲ್ಲಿದ್ದಾಗ ವಿದೇಶಗಳಿಂದ ಅವರು ಬಳಸಿ ಬಿಟ್ಟ ಗೋದಿ ಇತರೆ ಆಹಾರ ಪದಾರ್ಥಗಳನ್ನು ತರಸಿಕೊಳ್ಳಲಾಗುತ್ತಿತ್ತು. ೩೦-೪೦ ವರ್ಷಗಳ ನಂತರ ವಿದೇಶಗಳಿಗೆ ಇಲ್ಲಿಯ ಆಹಾರ ವಸ್ತುಗಳನ್ನು ಭಾರತೀಯರು ಕಳಿಸುವಂತಾಯಿತು. ಇದಕ್ಕೆ ವಿಜ್ಞಾನ-ತಂತ್ರಜ್ಞಾನವೇ ಕಾರಣವಾಗಿದೆ ಎಂದು ಹೇಳಿದರು.
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರಡ್ಡಿಯವರ ಕರ್ನಾಟಕ ಏಕಿಕರಣ ಚಳುವಳಿ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಲು ಕೆ.ಸಿ.ರಡ್ಡಿ ಫೌಂಡೇಷನ ಸ್ಥಾಪಿಸಲಾಗಿದೆ ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಜಿ. ವಲ್ಲ್ಯಾಪೂರ ವಿಜ್ಞಾನಿಗಳ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಮಾರಂಭದಲ್ಲಿ ವಿವಿಧ ಗಣ್ಯರನ್ನು ಸತ್ಕರಿಸಲಾಯಿತು. ಗಣ್ಯರು ಜಿಲ್ಲೆಯ ವಿವಿಧ ಶಾಲೆಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರದರ್ಶನ ವೀಕ್ಷಿಸಿ ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಇಮಾಮಹುಸೇನ ಹುನ್ನೂರ, ವಸಂತ ದಳವಾಯಿ, ವೈ.ಎಸ್.ಜಗ್ಗಿನವರ, ಎಸ್.ಜಿ.ಯರಗಟ್ಟಿ, ಎಸ್.ಬಿ. ವಲ್ಲ್ಯಾಪೂರ, ಪ್ರಕಾಶ ಅರಳಿ,ನೂರ ಅಹ್ಮದ, ಗಂಗವ್ವಾ ಕಮತಿ, ಬೀಬಿಜಾನ ನದಾಫ್, ತಮ್ಮಣ್ಣ ಕೋಳಿಗುಡ್ಡ, ಸಿದ್ದಪ್ಪ ಬಡಿಗೇರ, ಮಾಯಪ್ಪ ಬೆನಚನಮರಡಿ, ಬಸಗೌಡ ದೇಯನ್ನವರ, ನೀಲಮ್ಮ ಬೆಣ್ಣಿ, ಗುರುರಾಜ ಪೂಜೇರ, ಲಗಮನ್ನಾ ಕಳಸನ್ನವರ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ವಿವೇಕ ಹಳ್ಳೂರ ಸ್ವಾಗತಿಸಿದರು, ಬಂಡಿವಡ್ಡರ ನಿರೂಪಿಸಿದರು, ಎಸ್.ಎಸ್.ಕಡಕಬಾವಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ