ಶಾಕಿಂಗ್! ಚೀನಾ ಬೀಜ ಬರಲಿದೆ: ಭೂಮಿಯನ್ನೆ ಬಂಜರು ಮಾಡಲಿದೆ; ಇಂತಹ ಬೀಜ ಬಂದರೆ ಸುಟ್ಟು ಹಾಕಿ

ಅನಾಮಧೇಯರಿಂದ ಬೀಜ ಮಾರಾಟ ಹಿನ್ನೆಲೆ: ರೈತರಿಗೆ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಚೀನಾದಿಂದ ಬಿತ್ತನೆ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದೆ. ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ತಿಂಗಳಲ್ಲಿಯೇ ಬೆಳೆ ಸಂಪೂರ್ಣ ನಾಶವಾಗುತ್ತದೆ.
ಅನಾಮಧೇಯರಿಂದ ಬೀಜ ಬಂದರೆ ರೈತರು ಸ್ವೀಕರಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ .ಎಸ್. ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಇಂಗ್ಲೆಂಡ್, ಕೆನಡಾದಲ್ಲಿ ಅನೇಕ ರೈತರಿಗೆ ಇಂತಹ ಬೀಜಗಳನ್ನು ಕಳಿಸಲಾಗಿದೆ. ವಿವಿಧ
ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು ಎಲ್ಲಿಂದ ಕಳುಹಿಸುತ್ತಾರೆ ಎಂಬ ವಿವರಗಳೇ ಇರುವುದಿಲ್ಲ.
ಈ ಬೀಜಗಳ ಬಳಕೆಯಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಕ್ರಮೇಣ ಭೂಮಿಯೇ
ಬಂಜರಾಗುವ ಸಾಧ್ಯತೆಯೂ ಇದೆ ಎಂದೂ ಅವರು ಎಚ್ಚರಿಸಿದ್ದಾರೆ.
ಇಂತಹ ಬಿತ್ತನೆ ಬೀಜದ ಪೊಟ್ಟಣಗಳ ಪಾರ್ಸಲ್ ಬಂದರೆ ರೈತರು ವಾಪಸ್ ಕಳುಹಿಸಬೇಕು. ಒಂದು ವೇಳೆ ಸ್ವೀಕರಿಸಿದರೂ ಪೊಟ್ಟಣದ ಸಮೇತ ಅದನ್ನು ಸುಟ್ಟು ಹಾಕಬೇಕು ಇಲ್ಲವೆ, ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ
ಶಿವನಗೌಡ .ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಈ ಸುದ್ದಿಯನ್ನು ಎಲ್ಲ ರೈತರಿಗೆ ಶೇರ್ ಮಾಡಿ) 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button