ಸಭಾಪತಿ, ಸಭಾಧ್ಯಕ್ಷ, ಸಚೇತಕರ ಸಹಮತ; ಸರಕಾರದ ತೀರ್ಮಾನ ಬಾಕಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇದೇ ತಿಂಗಳಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯಲಿದೆಯೇ?
ವಿಧಾನ ಪರಿಷತ್ ಸಭಾಪತಿ, ವಿಧಾನಸಭಾಧ್ಯಕ್ಷ, ವಿಧಾನಪರಿಷತ್ ಮುಖ್ಯಸಚೇತಕ – ಈ ಮೂವರೂ ಬೆಳಗಾವಿಯ ಸುವ್ರಣ ವಿಧಾನಸೌಧದಲ್ಲಿ ಜುಲೈ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ನಡೆಸಲು ಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಇದೇ ತಿಂಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳದ ಅಧಿವೇಶನ ನಡೆಸುವಂತೆ ಪತ್ರ ಬರೆದಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸಹ ತಮ್ಮ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೊರಟ್ಟಿ ಬರೆದಿದ್ದಾರೆ.
ಹೊರಟ್ಟಿ ಅವರ ಪತ್ರ ಇಲ್ಲಿದೆ –
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೇ,
ಜಾಗತಿಕ ಮಹಾಮಾರಿ ಕೊರೋನಾದಿಂದಾಗಿ ನಮ್ಮ ರಾಜ್ಯವೂ ಸೇರಿದಂತೆ ಜಗತ್ತಿನ ಹಲವಾರು ದೇಶಗಳು ತಲ್ಲಣಗೊಂಡು ಲಾಕ್‍ಡೌನ್ ನಂತಹ ಹಲವು ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಕೋವಿಡ್‍ನ ಅಬ್ಬರ ಕಡಿಮೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಸ್ವಾಗತಾರ್ಹವಾಗಿದ್ದು, ಈ ಸಂದರ್ಭದಲ್ಲಿ ನಾನು ನೀಡಿದ ಹಲವು ಸಮಯೋಚಿತ ಹಾಗೂ ಅವಶ್ಯಕ ವಿಷಯಗಳ ಕುರಿತು ನೀಡಿದ ಸಲಹೆಗಳನ್ನು ಜಾರಿಗೊಳಿಸಿದ್ದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಕೋವಿಡ್ ಕಾಯಿಲೆ ಇದೀಗ ನಿಯಂತ್ರಣದಲ್ಲಿದ್ದು, ಬಹುತೇಕ ಜನರು ಸರ್ಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿರುವ ಸಂತೋಷದ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಾ, ಪ್ರಜಾಪ್ರಭುತ್ವದ ಮಹತ್ತರ ಘಟ್ಟವಾಗಿರುವ ವಿಧಾನ ಮಂಡಲದ ಅಧಿವೇಶನದ ಕುರಿತು ಪ್ರಸ್ತಾಪಿಸಲು ಇಚ್ಛಿಸುತ್ತೇನೆ.
ಪ್ರತಿ ವರ್ಷದ ಜೂನ್/ಜುಲೈ ತಿಂಗಳಿನಲ್ಲಿ ವಾಡಿಕೆಯಂತೆ ಮುಂಗಾರು ಅಧಿವೇಶನ ನಡೆಸುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದ್ದು, ಆದರೆ ಈ ಬಾರಿ ಕೋವಿಡ್‍ನ ಕಾರಣದಿಂದಾಗಿ ಅಧಿವೇಶನ ನಡೆಸುವ ಬಗ್ಗೆ ಇದುವರೆವಿಗೂ ಯಾವುದೇ ಪ್ರಕ್ರಿಯೆ ನಡೆದಿರುವುದಿಲ್ಲ. ಹಾಗೆಯೇ ಕಳೆದ 2018ರ ನಂತರ ಬೆಳಗಾವಿಯ ಸುವರ್ಣ ಸೌಧದಲ್ಲಿ ಯಾವುದೇ ಅಧಿವೇಶನ ನಡೆದಿರುವುದಿಲ್ಲ ಎನ್ನುವುದು ತಮ್ಮ ಗಮನದಲ್ಲಿದೆಯೆಂದು ನಾನು ಭಾವಿಸುತ್ತೇನೆ.
ಪ್ರಾದೇಶಿಕ ಅಸಮತೋಲನ ನಿವಾರಣೆ ದೃಷ್ಠಿಯಿಂದ ಪ್ರತಿವರ್ಷದ ಒಂದು ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಸೂಕ್ತ ಎನ್ನುವ ಈ ಮೊದಲು ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿ ಸರ್ಕಾರ ಜುಲೈನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಅಧಿವೇಶನ ನಡೆಸಬೇಕೆನ್ನುವುದು ನಮ್ಮ ಹಲವಾರು ಮಾನ್ಯ ಸದಸ್ಯರು ಹಾಗೂ ಆ ಭಾಗದ ಜನಪ್ರತಿನಿಧಿಗಳ ಒತ್ತಾಸೆಯಾಗಿದೆ.
ಕಾರಣ, ಜುಲೈನಲ್ಲಿ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವಂತೆ, ತಮಗೆ ಸಲಹೆ ರೂಪದ ಒತ್ತಾಯ ಮಾಡುತ್ತೇನೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವ ಕುರಿತು ಮಾನ್ಯ ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರವರೊಂದಿಗೆ ಚರ್ಚಿಸಿದ್ದು, ಅವರು ಸಹ ಈ ಬಗ್ಗೆ ತಮ್ಮ ಸಹಮತ ವ್ಯಕ್ತಪಡಿಸಿರುತ್ತಾರೆ. ಅಲ್ಲದೇ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಮಹಂತೇಶ ಕವಟಗಿಮಠ ಇವರು ಸಹ ಈ ಬಗ್ಗೆ ಒಲವು ವ್ಯಕ್ತಪಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ತಮ್ಮ ಮಂತ್ರಿಮಂಡಲ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಬೆಳಗಾವಿಯಲ್ಲಿಯೇ ಮುಂಬರುವ ಅಧಿವೇಶನವನ್ನು ನಡೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮನ್ನು ಕೋರುತ್ತೇನೆ.
(ಬಸವರಾಜ ಹೊರಟ್ಟಿ)
ಸರಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಬೆಳಗಾವಿಯ ಮುಂಗಾರು ಅಧಿವೇಶನಕ್ಕೆ ಸಜ್ಜಾಗಲಿದೆಯೇ?
2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವೇ ಇಲ್ಲದ ಸಮಯದಲ್ಲಿ ಕೇವಲ 10ದಿನದಲ್ಲಿ ಸಿದ್ಧತೆ ಮಾಡಿಕೊಂಡು ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗಿದೆ. ಈಗ ಸುವರ್ಣ ವಿಧಾನಸೌಧವಿದೆ, ಎಲ್ಲ ಮೂಲಸೌಕರ್ಯಗಳಿವೆ.
ಸರಕಾರ ಮನಸ್ಸು ಮಾಡಬೇಕಿದೆ ಅಷ್ಟೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ