Kannada NewsKarnataka NewsLatest
ಅಧಿವೇಶನ ಪೂರ್ವಸಿದ್ಧತೆ ಸಭೆ; ವಸತಿ, ಸಾರಿಗೆ, ಊಟೋಪಾಹಾರ ವ್ಯವಸ್ಥೆ ಕುರಿತು ಚರ್ಚೆ
ಅಧಿವೇಶನ ಸಮಗ್ರ ಸಿದ್ಧತೆಗೆ ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಿಸೆಂಬರ್ 13ರಿಂದ ನಡೆಯಲಿರುವ ವಿಧಾನಮಂಡಳದ ಅಧಿವೇಶನವನ್ನು ಕೋವಿಡ್ ಮಾರ್ಗಸೂಚಿ ಪಾಲನೆಯ ಜತೆಗೆ ವಸತಿ, ಸಾರಿಗೆ ಹಾಗೂ ಊಟೋಪಾಹಾರ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಅಚ್ಚುಕಟ್ಟಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಸೂಚನೆ ನೀಡಿದರು.
ಚಳಿಗಾಲದ ಅಧಿವೇಶನ ಪೂರ್ವಸಿದ್ಧತೆ ಕುರಿತು ಮಂಗಳವಾರ (ನ.23) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಾಕ್ ಡೌನ್ ಬಳಿಕ ಬಹುತೇಕ ಅತಿಥಿಗೃಹಗಳು, ಹೋಟೆಲ್ ಮತ್ತಿತರ ಕಡೆಗಳಲ್ಲಿ ಕೊಠಡಿಗಳು ಹೆಚ್ಚಿನ ಬಳಕೆ ಆಗಿರುವುದಿಲ್ಲ. ಆದ್ದರಿಂದ ಪ್ರತಿಯೊಂದನ್ನು ಪರಿಶೀಲಿಸಿ ಸ್ವಚ್ಛತೆ ಮತ್ತು ಸ್ಯಾನಿಟೈಜೇಷನ್ ಕೆಲಸ ಆರಂಭಿಸಬೇಕು.
ವಸತಿಗೆ ಸಂಬಂಧಿಸಿದಂತೆ ಕಳೆದ ಅಧಿವೇಶನಗಳ ಸಂದರ್ಭದಲ್ಲಿ ಎದುರಾಗಿರುವ ಅನಾನುಕೂಲತೆಗಳನ್ನು ಆಧರಿಸಿ ಅವುಗಳನ್ನು ನಿವಾರಿಸಲು ಮುಂಚಿತವಾಗಿ ಕ್ರಮ ಕೈಗೊಳ್ಳಬೇಕು.
ಸುರಕ್ಷತಾ ಕ್ರಮಗಳು, ಪಾರ್ಕಿಂಗ್ ವ್ಯವಸ್ಥೆ, ಮೊಬೈಲ್ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ತುರ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳು ಪೂರ್ವಭಾವಿ ಸಭೆಗಳನ್ನು ನಡೆಸಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸುವುದರೊಂದಿಗೆ ಅಧಿವೇಶನ ನಡೆಸಬೇಕಿದೆ.
ಅಗತ್ಯ ಮಾಸ್ಕ್, ಸ್ಯಾನಿಟೈಸರ್ ಒದಗಿಸವುದರ ಜತೆಗೆ ಸುರಕ್ಷಿತ ಅಂತರ ಕಾಪಾಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ವಿವಿಧ ಸಮಿತಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಯದ ಅಭಾವದ ಜತೆಗೆ ಚುನಾವಣೆ ಕೂಡ ನಡೆಯುತ್ತಿರುವುದರಿಂದ ಸಾರಿಗೆ, ವಸತಿ, ಶಿಷ್ಟಾಚಾರ ಪಾಲನೆ, ಊಟೋಪಹಾರ ಮತ್ತಿತರ ಸಿದ್ಧತೆಗಳನ್ನು ತುರ್ತಾಗಿ ಮಾಡಿಕೊಳ್ಳುವ ಕುರಿತು ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಕೂಲಂಕುಶವಾಗಿ ಚರ್ಚೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅಧಿವೇಶನದ ವಿಶೇಷ ಅಧಿಕಾರಿ ಡಾ.ಸುರೇಶ್ ಇಟ್ನಾಳ, ಹಿಂದೆ ನಡೆದಿರುವ ಅಧಿವೇಶನದಲ್ಲಿ ಉಂಟಾಗಿರುವ ಕೆಲ ಅನಾನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಮಳೆಯಾಗುವ ವರದಿಗಳು ಇರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಬಾರಿ ಪೊಲೀಸ್ ಸಿಬ್ಬಂದಿ ವಸತಿಗಾಗಿ ಪ್ರತ್ಯೇಕವಾಗಿ ತಾತ್ಕಾಲಿಕ ಟೌನ್ ಷಿಪ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಅವರು ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಡಾ. ಶಂಕರಪ್ಪ ವಣಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಕಾಡಾ ಅಧಿಕಾರಿ ಶಶಿಧರ್ ಕುರೇರ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ