ನಾಳೆಯೇ ಅಧಿವೇಶನ; ಇನ್ನೂ ಆಗಿಲ್ಲ ವಿಪಕ್ಷ ನಾಯಕನ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ಕಾಂಗ್ರೆಸ್ ಹಿಂದೆಂದಿಗಿಂತ ಸಂಕಷ್ಟವನ್ನು ಈಗ ಎದುರಿಸುತ್ತಿದೆ. ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದ, 70 ವರ್ಷ ಆಳಿದ್ದ ರಾಷ್ಟ್ರೀಯ ಪಕ್ಷ ಈಗ ರಾಷ್ಟ್ರಮಟ್ಟದಲ್ಲಷ್ಟೆ ಅಲ್ಲ ಕರ್ನಾಟಕದಲ್ಲಿ ಕೂಡ ನಲುಗಿಹೋಗಿದೆ.

ಜೆಡಿಎಸ್ ಜೊತೆ ಮೈತ್ರಿ ಸರಕಾರ ರಚಿಸಲು ಹೋಗಿ ಇನ್ನಷ್ಟು ಪಾತಾಳಕ್ಕೆ ಕುಸಿದಂತೆ ಕಾಣುತ್ತಿದೆ. ಪಕ್ಷದೊಳಗೆ ನಾಯಕತ್ವ, ಹಿಡಿತವೇ ಇಲ್ಲವಾಗಿದೆ. ಆಂತರಿಕ ಕಚ್ಚಾಟ, ಮೂಲ, ವಲಸಿಗ ಜಗಳ ಪಕ್ಷವನ್ನು ಅವನತಿಯತ್ತ ತಳ್ಳುತ್ತಿದೆ. ಪಕ್ಷದಲ್ಲಿರುವ 2ನೇ ಹಂತದ ನಾಯಕರು ಕಂಗೆಡುವಂತಾಗಿದೆ.

ಇದೀಗ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ. ವಿಧಾನಸಭೆಯ ಅಧಿವೇಶನ ನಡೆಯುವ ಮುನ್ನಾದಿನವೂ ವಿಪಕ್ಷ ನಾಯಕನ ಆಯ್ಕೆ ಸಾಧ್ಯವಾಗುತ್ತಿಲ್ಲ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಎಚ್.ಕೆ.ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮೊದಲಾದವರು ವಿಪಕ್ಷ ನಾಯಕ ಸ್ಥಾನದ ಖುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.

ಡಿ.ಕೆ.ಶಿವಕುಮಾರ ಇದ್ದಿದ್ದರೆ…

ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಜೈಲು ಸೇರಿರುವುದರಿಂದ ಇತರರಿಗೆ ದಾರಿ ಸುಗಮವಾಗಿದೆ. ಡಿ.ಕೆ.ಶಿವಕುಮಾರ ಸಂಕಷ್ಟಕ್ಕೆ ಸಿಲುಕದಿದ್ದರೆ ಪಕ್ಷವನ್ನು ಗಟ್ಟಿಯಾಗಿ ಸಮರ್ಥಿಸುವ ಸಾಮರ್ಥ್ಯ ಅವರಿಗಿತ್ತು. ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ನಿಭಾಯಿಸುತ್ತಿದ್ದರು.

ಇದೀಗ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ ಹಿರಿಯ ನಾಯಕರೆಲ್ಲ ತಿರುಗಿ ಬಿದ್ದಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಅಧಿಕಾರ ನಡೆಸಿದ್ದಾರೆ. ಈಗ ಮತ್ತೆ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಅವರಿಗೆ ನೀಡುವುದು ಸರಿಯಲ್ಲ. ಅಷ್ಟಾಗ್ಯೂ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಅವರ ಕೊಡುಗೆ ಅಷ್ಟಕ್ಕಷ್ಟೆ ಎನ್ನುವುದು ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರ ಅಭಿಪ್ರಾಯ.

ಗುರುವಾರ ವಿಧಾನಮಂಡಳದ ಅಧಿವೇಶನ ಆರಂಭವಾಗಲಿದೆ. ಆದರೆ ಅತಿ ದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಅಧಿವೇಶನಕ್ಕೆ ಸಿದ್ದವಾಗಿಲ್ಲ. ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ನಡೆಸಬೇಕಾದ ಕಾರ್ಯತಂತ್ರದ ಕುರಿತು ಸಹ ಯಾವುದೇ ಚರ್ಚೆಯಾಗಿಲ್ಲ. ಇನ್ನೊಂದು ವಿರೋಧ ಪಕ್ಷವಾದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸರಕಾರ ಎದುರಿಸುವ ಸಾಧ್ಯತೆ ಕಡಿಮೆ.

ಸಾಂಘಿಕ ಪ್ರಯತ್ನ ಇಲ್ಲ

ಈ ಹಿನ್ನೆಲೆಯಲ್ಲಿ ವಯಕ್ತಿಕ ನೆಲೆಯಲ್ಲಿ ನಾಯಕರು ಸರಕಾರದ ಮೇಲೆ ವಾಗ್ದಾಳಿ ನಡೆಸಬಹುದೇ ವಿನಃ ಸಾಂಘಿಕವಾಗಿ ಅಂತಹ ಸಾಧ್ಯತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಪ್ರವಾಹ ಅಪ್ಪಳಿಸಿ ಸರಿಯಾದ ರೀತಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದ್ದರೂ ಅದನ್ನು ಸಮರ್ಥವಾಗಿ ಎದುರಿಸಲು ವಿರೋಧ ಪಕ್ಷಗಳು ಸಜ್ಜಾಗದಿರುವುದು ವಿಪರ್ಯಾಸವೇ ಸರಿ.

ಪಕ್ಷದ ನಾಯಕ ಮಧುಸೂದನ ಮಿಸ್ತ್ರಿ ರಾಜ್ಯಕ್ಕೆ ಬಂದು ವರದಿ ಪಡೆದು ಹೋಗಿದ್ದಾರೆ. ವರದಿ ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೈ ಸೇರಿದೆ. ಇಂದು ಸಂಜೆಯೊಳಗೆ ಅವರು ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರ ಪಕ್ಷದಲ್ಲಿ ಇನ್ನಷ್ಟು ಕಚ್ಚಾಟಕ್ಕೆ, ಭಿನ್ನಮತಕ್ಕೆ ಕಾರಣವಾಗದಂತೆ ಎಚ್ಚರ ವಹಿಸಬೇಕಾಗಿದೆ. ಒಂದೊಮ್ಮೆ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದರೆ ಸಿದ್ದರಾಮಯ್ಯ ಸುಮ್ಮನಿರುತ್ತಾರೆಯೇ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button