Kannada NewsKarnataka NewsLatest

ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಅಭಿವೃದ್ಧಿಗೆ ಪಣ ತೊಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಪಣತೊಡಿ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಗುರುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸೋತವರು ನಮ್ಮವರೇ. ಗೆದ್ದವರು ನಮ್ಮವರೇ. ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಅಭಿವೃದ್ಧಿಯತ್ತ ಗಮನ ನೀಡಿ ಎಂದು ತಿಳಿಸಿದರು.
ತುಕ್ಕಾನಟ್ಟಿ ಗ್ರಾಮದ ಅಭಿವೃದ್ಧಿಗಾಗಿ ಕಳೆದ ಒಂದೂವರೆ ದಶಕದಿಂದ ಸಾಕಷ್ಟು ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದನೆ ಮಾಡಲಾಗಿದೆ. ತುಕ್ಕಾನಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ರೈತರ ಜಮೀನುಗಳ ರಸ್ತೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಬಂದಾಗ ಎಲ್ಲರೂ ಒಂದಾಗಿ ದುಡಿಯುವಂತೆ ಇದೇ ಸಂದರ್ಭದಲ್ಲಿ ಮುಖಂಡರಿಗೆ ಸಲಹೆ ಮಾಡಿದರು.
ಕೊರೋನಾ ಬಗ್ಗೆ ಜಾಗೃತರಾಗಿ : ಬಹುತೇಕ ಜನರು ಕೊರೋನಾ ಮುಗಿದಿದೆ. ಇನ್ನು ಮುಂದೆ ಇದು ಬರುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಈಗಾಗಲೇ ಕೊರೋನಾ ಬಹಳಷ್ಟು ಜನರನ್ನು ಆಹುತಿ ಪಡೆದುಕೊಂಡಿದೆ. ಸಾಕಷ್ಟು ನೋವುಗಳನ್ನು ನೀಡಿದೆ. ಕೊರೋನಾ ಎರಡನೇ ಅಲೆ ಮುಗಿಯುವ ಮುನ್ನವೇ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಿದೆ. ದೇವರ ದಯೆಯಿಂದ ಮೂರನೇ ಅಲೆ ಬರಬಾರದು ಎಂದು ಪ್ರಾರ್ಥಿಸಿಕೊಳ್ಳೋಣ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸೋಣ. ಏನಾದರೂ ಮೈ ಮರೆತರೆ ಜೀವಕ್ಕೆ ಅಪಾಯವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ಕೊರೋನಾ ಮೂರನೇ ಅಲೆಗೆ ನಾವೆಲ್ಲರೂ ಜಾಗೃತರಾಗಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮೂರನೇ ಅಲೆ ಅಪ್ಪಳಿಸಿದರೂ ಅದನ್ನು ಸಮರ್ಥವಾಗಿ ಎದುರಿಸಲಿಕ್ಕೆ ನಮ್ಮ ತಾಲೂಕಾಡಳಿತ ಸಿದ್ಧವಿದೆ. ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಈಗಾಗಲೇ ತಾಲೂಕಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುಧಾರಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ದೂರದ ಊರುಗಳಿಗೆ ಹೋಗುವ ಬದಲು ಸ್ಥಳೀಯವಾಗಿಯೇ ಎಲ್ಲ ರೋಗಿಗಳಿಗೆ ಸಿಗಬೇಕಿರುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದೊರೆಯುವಂತೆ ಈಗಾಗಲೇ ವೈದ್ಯರಿಗೆ ಸೂಚಿಸಲಾಗಿದೆ. ಕೊರೋನಾ ಸಮಯದಲ್ಲಿ ರೋಗಿಗಳಿಗೆ ಎಲ್ಲ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದೇವೆ. ಕೊರೋನಾ ಕಾಳಜಿ ಕೇಂದ್ರಗಳನ್ನು ತೆರೆದು ಉತ್ತಮ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ವೈದ್ಯರು ಮಾಡಿದ್ದಾರೆ. ವೈದ್ಯರ ಕಾರ್ಯವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.
೧.೫೪ ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ೭೮ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನದ ಸಮುದಾಯ ಭವನ, ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎಪಿಎಂಸಿ ಹೊರಾಂಗಣ ಮಾರುಕಟ್ಟೆ, ೪೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ೪ ಶಾಲಾ ಕೊಠಡಿಗಳು, ೮ ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಟಿಎಚ್‌ಓ ಮುತ್ತಣ್ಣ ಕೊಪ್ಪದ, ಡಾ.ಆರ್.ಎಸ್. ಬೆಣಚಿನಮರಡಿ, ಮುಖಂಡರಾದ ಸಿದ್ದಪ್ಪ ಹಮ್ಮನ್ನವರ, ಶಿವಪ್ಪ ಮರ್ದಿ, ರವಿ ಗದಾಡಿ, ಸೋಮು ಹುಲಕುಂದ, ಅಜ್ಜಪ್ಪ ಮನ್ನಿಕೇರಿ, ಉದ್ದಪ್ಪ ದುರದುಂಡಿ, ರಾಮು ಗದಾಡಿ, ಭೀಮಶಿ ಗದಾಡಿ, ಸತ್ತೆಪ್ಪ ಮಲ್ಲಾಪೂರ, ವಸಂತ ಹಮ್ಮನ್ನವರ, ಯಲ್ಲಪ್ಪ ಹುಲಕುಂದ, ಗಂಗಾರಾಮ ಗುಡಗುಡಿ, ಗುರುನಾಥ ಕಂಕಣವಾಡಿ, ಯಮನಪ್ಪ ಗದಾಡಿ, ಬಾಪು ಗದಾಡಿ, ಲಗಮಪ್ಪ ಭೋಜ, ಪಿಎಚ್‌ಸಿ ವೈದ್ಯಾಧಿಕಾರಿ ಡಾ.ರಾಹುಲ ಬೆಳವಿ, ಪಿಡಿಓ ಗುಂಡಿ ಮುಂತಾದವರು ಉಪಸ್ಥಿತರಿದ್ದರು.

ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ – ಬಾಲಚಂದ್ರ ಜಾರಕಿಹೊಳಿ ಮನವಿ

ಸಕ್ಕರೆ ಕಾರ್ಖಾನೆ ಸುಧಾರಣೆಗೆ ಅಮೂಲಾಗ್ರ ಬದಲಾವಣೆ; ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button