Kannada NewsKarnataka News

ಸೇವಾಯಾನ – ಆತ್ಮಚರಿತ್ರೆ ಬಿಡುಗಡೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖ್ಯಾತ ವೈದ್ಯರಾದ ಡಾ. ಎಮ್.ಎಲ್. ತುಕ್ಕಾರ ಅವರು ಪ್ರಾಮಾಣಿಕವಾದಂತಹ ತಮ್ಮ ವೃತ್ತಿ ಜೀವನ ನಡೆಸಿದವರು. ಆತ್ಮಚರಿತ್ರೆಯೆಂದೊಡನೆ ನೆನಪಾಗುವುದು ಪ್ರಾಮಾಣಿಕತೆ. ಆತ್ಮಚರಿತ್ರೆ ಲೇಖಕ ತುಂಬ ಪ್ರಾಮಾಣಿಕನಿರಬೇಕು. ಹಾಗೆ ಇಲ್ಲಿಯ ವಿಷಯಗಳೆಲ್ಲ ಸತ್ಯಪೂರ್ಣವಾಗಿರಬೇಕು. ಆತ್ಮಚರಿತ್ರೆಯಲ್ಲಿ ಬರುವ ವಿಷಯಗಳೆಲ್ಲ ನಾನು ನೋಡಿದ್ದೇನೆ. ನಾನು ಕಣ್ಣಾರೆ ಕಂಡಿದ್ದೇನೆ. ನಾನು ಅನುಭವಿಸಿದ್ದೇನೆ ಎನ್ನುವವನ್ನು ಮಾತ್ರ ದಾಖಲಿಸಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಡಾ. ತುಕ್ಕಾರರವರು ಪ್ರಾಮಾಣಿಕವಾಗಿ ಈ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ ಎಂದು ಆರ್. ಪಿ. ಡಿ. ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಎಸ್. ಎಲ್. ಕುಲಕರ್ಣಿ  ಹೇಳಿದರು.

ನಗರದ ಸಂಕಂ ಹೊಟೇಲ್ ಸಭಾಗೃಹದಲ್ಲಿ  ರವಿವಾರ ಲೇಖಕಿ ನಿರಜಾ ಗಣಾಚಾರಿ ಅವರು ಬರೆದಿರುವ ಡಾ. ಎಂ. ಎಲ್ ತುಕ್ಕಾರ ಅವರ ’ಸೇವಾಯಾನ’ ಆತ್ಮ ಚರಿತ್ರೆ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ’ಸೇವಾಯಾನ’ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಡಾ. ಎಸ್. ಎಲ್ ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿಯವರು ’ಸೇವಾಯಾನ’ ಕೃತಿಯನ್ನು ಪರಿಚಯಿಸುತ್ತ, ಡಾ, ಎಮ್. ಎಲ್. ತುಕ್ಕಾರ ಅವರು ತುಂಬ ದಯಾಮಯಿಗಳು. ಇವರು ತುಂಬ ಎತ್ತರಕ್ಕೆ ಬೆಳೆದಿದ್ದರೂ ಕೂಡ ತಮ್ಮ ಬೆಳವಣಿಗೆಯೊಂದಿಗೆ ದಯಾ, ಮಯಾ, ಅಂತಃಕರಣ ಗುಣವನ್ನೂ ಬೆಳೆಸಿಕೊಂಡಿದ್ದಾರೆ. ಸೇವಾಯಾನ ಆತ್ಮಚರಿತ್ರೆಯಲ್ಲಿ ಡಾ. ತುಕ್ಕಾರ ಅವರು ತಮ್ಮ ವಂಶದವರನ್ನು, ಗೆಳೆಯರನ್ನು, ತಮಗೆ ನೆರವಾದವರನ್ನು, ತಮ್ಮ ಚಟುವಟಿಕೆಗಳನ್ನು ಹೀಗೆ ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ. ಈ ಕೃತಿಯು ೩೧ ಅಧ್ಯಾಯಗಳನ್ನು ಒಳಗೊಂಡಿವೆ. ಡಾ. ತುಕ್ಕಾರ ದಂಪತಿಗಳು ಇಷ್ಟೊಂದು ರಸಿಕರೆಂಬುದನ್ನು ಈ ಕೃತಿಯನ್ನು ಓದಿದಾಗಲೇ ನನಗೆ ಗೊತ್ತಾದದ್ದು. ಹಲವಾರು ಅಡ್ಡಿ ಅಡತಡೆಗಳ ಮಧ್ಯ ಇವರು ಪ್ರೇಮ ವಿವಾಹವಾಗಿ ತೃಪ್ತಿ ಜೀವನ ನಡೆಸುತ್ತಿದ್ದಾರೆ. ಗ್ರಾಮೀಣದ ಜೀವನದಲ್ಲಿ ಬರುವ ಸಂಕಷ್ಟಗಳು ಅವುಗಳನ್ನು ಹೇಗೆ ಎದುರಿಸಬೇಕೆಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಕೃತಿಯನ್ನು ವಿಶೇಷವಾಗಿ ಗ್ರಾಮೀಣ ಯುವಕರೊಮ್ಮೆ ಓದಲೇಬೇಕು ಎಂದು ಹೇಳಿದ ಅವರು, ಡಾ. ತುಕ್ಕಾರ ಹಾಗೂ ಲೇಖಕಿ ನಿರಜಾ ಗಣಾಚಾರಿ ಅವರನ್ನು ಅಭಿನಂದಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಲೇಖಕ ಶಿರೀಷ ಜೋಶಿ ಅವರು ಮನುಷ್ಯ ಜೀವನದಲ್ಲಿ ಸಾಧನೆಯ ಮೂರು ಮೆಟ್ಟಿಲುಗಳು ಅರ್ಥ, ಕಾಮ, ಮೋಕ್ಷ. ಮಾನವ ಧರ್ಮವನ್ನು ನಾವು ಸಾಧಿಸಬೇಕು. ಮನುಷ್ಯ ಜೀವನ ಅರ್ಥಪೂರ್ಣವಾಗಿ ಬದಕುವುದೇ ಅರ್ಥ ಸಾಧನೆ. ಸೂಕ್ತವಾದುದನ್ನು ಬಯಸುವುದೇ ಕಾಮಸಾಧನೆ. ಇನ್ನು ಮೋಕ್ಷವೆನ್ನುವುದು ಇದೆಯೋ ಇಲ್ಲವೋ ಯಾರಿಗೂ ಖಚಿತವಾಗಿ ಗೊತ್ತಿಲ್ಲ. ಆದರೆ ಮನುಷ್ಯ ಇದ್ದಾಗ ಹಾಗೂ ಹೋದ ನಂತರ ಜನರ ಬಾಯಲ್ಲಿ ಉಳಿದುಕೊಳ್ಳುವಂತಹ ಕಾರ್ಯವನ್ನು ನಾವು ಮಾಡಿಹೋದಲ್ಲಿ ಅದುವೇ ಮೋಕ್ಷ ಸಾಧನೆ ಎಂದು ನನ್ನ ಅಭಿಪ್ರಾಯ. ಈ ಎಲ್ಲವನ್ನೂ ಸಾಧಿಸಿದವರು ನಮ್ಮ ಡಾ. ಎಮ್. ಎಲ್.ತುಕ್ಕಾರ ಅವರು ಎಂದು ಹೇಳಿದರು.
ಪ್ರಕಾಶಕರಾದ ಡಾ. ಉಜ್ವಲಾ ತುಕ್ಕಾರ ಅವರನ್ನು ಶಾಲು ಹೊದಿಸಿ ಫಲಪುಷ್ಟ ನೀಡಿ ಸನ್ಮಾನಿಸಲಾಯಿತು.
ಎನ್. ಬಿ. ದೇಶಪಾಂಡೆ, ನೀರಜಾ ಗಣಾಚಾರಿ, ನಾಗರಾಜ ಅಧ್ಯಾಪಕ, ಅತುಲ ಇಂಪ್ರೇಶನ್, ನಾರಾಯಣ ಗಣಾಚಾರಿ ಅವರನ್ನು ಗೌರವಿಸಲಾಯಿತು. ಡಾ. ಪ್ರಕಾಶ ಮಣ್ಣೂರ ಶುಭಕೋರಿದರು.
ನ್ಯಾಯವಾದಿ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕು. ನಿತ್ಯಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಎಮ್. ಎಲ್. ತುಕ್ಕಾರ ಸ್ವಾಗತಿಸಿದರು. ನೀರಜಾ ಗಣಾಚಾರಿ ವಂದಿಸಿದರು. ನಾರಾಯಣ ಗಣಾಚಾರಿ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button