ಪ್ರಗತಿವಾಹಿನಿ ಸುದ್ದಿ, ರಾಯಚೂರು: ಪ್ರಾಚಾರ್ಯನೊಬ್ಬ ತನ್ನ ಸ್ಥಾನ- ಮಾನಗಳ ಪರಿವೆ ಇಲ್ಲದೆ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮದೃಷ್ಟಿ ಬೀರಿ ಕಂಬಿ ಹಿಂದೆ ಸರಿದಿದ್ದಾನೆ.
ವಿಜಯಕುಮಾರ ಅಂಗಡಿ ಆರೋಪಿ. ಈತನ ವಿರುದ್ಧ ಪೋಕ್ಸೋ, ಲೈಂಗಿಕ ಕಿರುಕುಳ, ಜಾತಿ ನಿಂದನೆ ಸೇರಿದಂತೆ ಹಲವು ಕಾಯ್ದೆ, ಕಲಂಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಮೊದಲಿಗೆ ಸಭ್ಯನಾಗೇ ಇದ್ದ ಪ್ರಾಚಾರ್ಯ ಅಂಗಡಿ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯೊಬ್ಬಳ ವಿಷಯದಲ್ಲಿ ಗಡಿ ಮೀರಿದ ವರ್ತನೆ ತೋರಲು ಹೋಗಿ ಈಗ ಫಜೀತಿಗೆ ಬಿದ್ದಿದ್ದಾನೆ. ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಅಗತ್ಯಕ್ಕೂ ಹೆಚ್ಚೇ ಹಚ್ಚಿಕೊಂಡಿದ್ದ ಆರೋಪಿ ಪ್ರಾರಂಭದಲ್ಲಿ ಆಕೆಯ ಮೊಬೈಲ್ ಸಂಖ್ಯೆ ಪಡೆದು ಮೆಸೇಜ್ ಗಳನ್ನು ಹರಿಬಿಡತೊಡಗಿದ. ಆದರೆ ಅವೆಲ್ಲವೂ ಸಭ್ಯತೆಯ ಪರಿಮಿತಿಯಲ್ಲಿದ್ದವು.
ಬರಬರುತ್ತ ಮೆಸೇಜ್ ನ ರುಚಿ ಬದಲಾಗುತ್ತ ಸಾಗಿ ಅಶ್ಲೀಲ ಪದಗಳೊಂದಿಗೆ ವಿದ್ಯಾರ್ಥಿನಿಗೆ ಮುಜುಗರ ಉಂಟುಮಾಡತೊಡಗಿದೆ. ಹೇಳಬಾರದ ವಿಷಯಗಳನ್ನೂ ಖುಲ್ಲಂಖುಲ್ಲಾ ಹೇಳತೊಡಗಿದೆ. ಕೊನೆಕೊನೆಗೆ ಇದು ವಿಪರೀತಕ್ಕೆ ಹೋಗಿ ಕಾಲ್ ಗಳನ್ನು ಮಾಡಿ ವಿದ್ಯಾರ್ಥಿನಿಗೆ ತನ್ನ ಮನೆಗೇ ಬಂದು ಒಂದು ಗಂಟೆ ಕಳೆಯುವಂತೆ ಹೇಳತೊಡಗಿದ. ಮಾಮೂಲಿ ಕಾಲ್ ಬಿಟ್ಟು ವಿಡಿಯೋ ಕಾಲ್ ಗಾಗಿ ದುಂಬಾಲು ಬೀಳತೊಡಗಿದ.
ವಿದ್ಯಾರ್ಥಿನಿ ‘ಸರ್’ ಎಂದು ಸಂಬೋಧಿಸಿದರೆ ಪ್ರತಿರೋಧ ವ್ಯಕ್ತಪಡಿಸಿ ”ಬಾಯ್ ಫ್ರೆಂಡ್’ ಎನ್ನುವಂತೆ ಒತ್ತಾಯಿಸುತ್ತಿದ್ದ. ಇಷ್ಟಾದರೂ ವಿದ್ಯಾರ್ಥಿನಿ ಕೈಗೆಟುಕದಿದ್ದಾಗ ಕೊನೆಯ ಹಂತದಲ್ಲಿ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಹಕರಿಸುವುದಾಗಿ, ಇಲ್ಲದಿದ್ದಲ್ಲಿ ಕಷ್ಟವಾಗಲಿರುವುದಾಗಿ ಎಚ್ಚರಿಕೆ ನೀಡತೊಡಗಿದ.
ತಂದೆ ವಯಸ್ಸಿನ ಪ್ರಾಚಾರ್ಯನ ಅಡ್ಡ ದಂಧೆಗೆ ಬೇಸತ್ತ ಬಾಲಕಿ ಕುಟುಂಬಕ್ಕೆ ವಿದಯ ತಿಳಿಸುತ್ತಲೇ ಕುಟುಂಬವರು ಹಾಗೂ ಸ್ಥಳೀಯರು ಶಾಲೆಗೇ ನುಗ್ಗಿ ಪ್ರಾಚಾರ್ಯನ ಚಳಿ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಸಿನೆಮಾ ಸ್ಟೋರಿಯಂತೆ ಮಧ್ಯೆ ನುಗ್ಗಿ ಪ್ರಾಚಾರ್ಯನ ಹೆಡೆಮುರಿ ಕಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ