ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲು ಪಾಲಾಗಿದ್ದ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅಲಹಾಬಾದ್ ಹೈಕೋರ್ಟ್ ಸ್ವಾಮಿ ಚಿನ್ಮಯಾನಂದಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬ್ಲ್ಯಾಕ್ಮೇಲ್ ಆರೋಪದ ಮೇಲೆ 4 ತಿಂಗಳ ಹಿಂದೆ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಸ್ವಾಮಿ ಚಿನ್ಮಯಾನಂದ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಸಂತ್ರಸ್ತ ಯುವತಿ ವಿರುದ್ಧವೇ ಕೇಸ್ ದಾಖಲಿಸಿ, ಆಕೆಯನ್ನೇ ಬಂಧಿಸಲಾಗಿತ್ತು.
ಸ್ವಾಮಿ ಚಿನ್ಮಯಾನಂದ ಅವರ ಆಶ್ರಮಕ್ಕೆ ಸೇರಿದ ಕಾನೂನು ಕಾಲೇಜಿನಲ್ಲಿ ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದೇ ಆಶ್ರಮಕ್ಕೆ ಸೇರಿದ ಹಾಸ್ಟೆಲ್ನಲ್ಲಿದ್ದ ಯುವತಿ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿ ಚಿನ್ಮಯಾನಂದ ಯುವತಿಗೆ ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಸಂತ್ರಸ್ತ ಯುವತಿಯು ತನ್ನ ಮೇಲೆ ಸ್ವಾಮಿ ಚಿನ್ಮಯಾನಂದ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ ಬಳಿ ಹೇಳಿಕೆ ದಾಖಲಿಸಿದ್ದರು. ಚಿನ್ಮಯಾನಂದ ಒಂದು ವರ್ಷಗಳಿಂದ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿದ್ದಾಗಿ ಹೇಳಿಕೆ ನೀಡಿದ್ದಳು. ಅಲ್ಲದೇ ಚಿನ್ಮಯಾನಂದ ಅವರನ್ನು ಕೂಡಲೇ ಬಂಧಿಸದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿಯೂ ಆ ಯುವತಿ ಬೆದರಿಕೆ ಹಾಕಿದ್ದರು.
ಪ್ರಕರಣದಲ್ಲಿ ದೂರು ನೀಡಿದ ಸಂತ್ರಸ್ತ ಯುವತಿಯನ್ನು ಕೂಡ ಪೊಲೀಸರು ಬಂಧಿಸಿದ್ದರು. ಡಿಸೆಂಬರ್ ನಲ್ಲಿ ಆಕೆಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಇಂದು ಅತ್ಯಾಚಾರ ಆರೋಪಿ ಸ್ವಾಮಿ ಚಿನ್ಮಯಾನಂದಗೆ ಕೂಡ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ