ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಶಹಾಪುರ, ಖಾಸಭಾಗ ಮತ್ತು ವಡಗಾಂವ ಭಾಗದಲ್ಲಿನ ನೇಕಾರರು ಶ್ರಮಪಟ್ಟು ನೇಯುವ ಸೀರೆಗಳು ಬೆಳಗಾವಿ ಶಹಾಪುರ ಸೀರೆ ಎಂದು ಸಮಸ್ತ ಜಿಲ್ಲೆ ಮತ್ತು ವಿಶ್ವದಲ್ಲಿ ಪ್ರಖ್ಯಾತಗೊಂಡಿದೆ. ಆದರೆ ಇಂದಿನ ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಎಲ್ಲರೂ ಮುಂದಾಗಬೇಕು ಎಂದು ನಗರದ ವ್ಯಾಪಾರಸ್ಥರ ಅಸೋಸಿಯೇಶನ್ ಅಧ್ಯಕ್ಷ ಸುನಿಲ ನಾಯಕ ಹೇಳಿದರು.
ಆರ್.ಎಸ್.ಎಸ್ ಪ್ರೇರಿತ ಸೇವಾಭಾರತಿಯ ನೇತೃತ್ವದಲ್ಲಿ ನಗರದ ಸಮಾದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಇವತ್ತಿನಿಂದ ಒಂದು ವಾರ ನಡೆಯಲಿರುವ ಬೆಳಗಾವಿ ನೇಕಾರರ ಸೀರೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷದ ಅತಿವೃಷ್ಟಿಯಿಂದ ಮೊದಲೆ ನೇಕಾರರು ಸಮಸ್ಯೆ ಎದುರಿಸುತ್ತಿದ್ದರು. ಕೋವಿಡ್ -19 ಹಿನ್ನೆಲೆಯಲ್ಲಿ ಎದುರಾದ ಲಾಕಡೌನ್ ದಿಂದ ಸುಮಾರು 600ಕ್ಕೂ ಹೆಚ್ಚು ನೇಕಾರರಲ್ಲಿ 5 ಲಕ್ಷಕ್ಕೂ ಹೆಚ್ಚು ಸೀರೆಗಳ ದಾಸ್ತಾನು ಮಾರಾಟವಾಗದೆ ಹಾಗೇ ಉಳಿದಿದೆ. ನೇಕಾರರ ಸೀರೆಗಳನ್ನು ಅಂಗಡಿಕಾರರು ಖರೀದಿ ಮಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಅಂಗಡಿಕಾರರು ನೇಕಾರರ ಸೀರೆಗಳನ್ನು ಕೊಳ್ಳಲು ನಿರಾಕರಿಸುತ್ತಿದ್ದಾರೆ. ಒಟ್ಟಾರೆ ಬೆಳಗಾವಿ ನೇಕಾರರ ಸ್ಥಿತಿ ಶೋಚನೀಯವಾಗಿದೆ ಎಂದರು.
ಕ್ರೀಡಾಭಾರತಿಯ ರಾಜ್ಯ ಸಂಚಾಲಕ ಅಶೋಕ ಶಿಂತ್ರೆ ಮಾತನಾಡಿ, ನೇಕಾರಿಕೆಯು ಬೆಳಗಾವಿಯ ಅತಿ ಪುರಾತನ ಗುಡಿ ಕೈಗಾರಿಕೆ ಎಂದು ಪರಿಗಣಿಸಲ್ಪಟ್ಟಿದೆ. ಇಂದು ಆ ನೇಕಾರಿಕೆ ಕ್ಷೇತ್ರವು ಕೊರೋನಾ ಮಹಾಮಾರಿಯ ಪರಿಣಾಮದಿಂದ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಆರ್.ಎಸ್.ಎಸ್ ಪ್ರೇರಿತ ಸೇವಾಭಾರತಿ ತಂಡವು ನೇಕಾರರ ಸೀರೆ ನೇರವಾಗಿ ಗ್ರಾಹಕನಿಗೆ ಮಾರಾಟಮಾಡುವ ವ್ಯವಸ್ಥೆ ಕಲ್ಪಿಸಿದೆ. ಆದ್ದರಿಂದ ಬೆಳಗಾವಿಯ ನಾಗರಿಕರು ನೇಕಾರರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಕರೆಯಂತೆ ಇಂದು ಸ್ಥಾನಿಕ ಉತ್ಪಾದನೆಗಳಿಗೆ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಮಯ ಬಂದೊದಗಿದೆ. ಸ್ಥಾನಿಕ ಗುಡಿ ಕೈಗಾರಿಕೆಗಳ ಬೆಳವಣಿಗೆಯಲ್ಲಿ ದೇಶದ ನಿಜವಾದ ಆರ್ಥಿಕ ಬೆಳವಣಿಗೆ ಅಡಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಬೆಳಗಾವಿಯ ವಿವಿಧ ಸ್ಥಾನಿಕ ಗುಡಿ ಕೈಗಾರಿಕೆಗಳ ವಸ್ತುಗಳ ಖರೀದಿಗೆ ಮುಂದಾಗಬೇಕು ಮತ್ತು ದೇಶವನ್ನು ಆತ್ಮ ನಿರ್ಭರತೆಯತ್ತ ಸಾಗಿಸಬೇಕು ಎಂದರು.
ವ್ಯಾಪಾರಿ ಬಾಳಣ್ಣ ಕಗ್ಗಣಗಿ, ಹೋಲ ಸೇಲ್ ಸೀರೆ ವ್ಯಾಪಾರಸ್ತ ರಾಕೇಶ ಕಟಾರಿಯಾ, ಸಮಾದೇವೀ ಮಂದಿರದ ಅಧ್ಯಕ್ಷ ದತ್ತಾ ಕಣಬರ್ಗಿ, ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಸವಿತಾ ಸಾತಪುತೆ , ನೇಕಾರ ಸಮಾಜದ ಪ್ರಮುಖರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ