Karnataka NewsLatest

ಸ್ವ ಪಕ್ಷಗಳಲ್ಲಿ ಮೂವರಿಗೂ ಅವಮಾನ: ಜಾರಕಿಹೊಳಿ ಸಹೋದರರನ್ನು ಜೆಡಿಎಸ್ ಗೆ ಆಹ್ವಾನಿಸಿದ ಕುಮಾರಸ್ವಾಮಿ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದೆ. ಬೆಳಗಾವಿಯ ಅತ್ಯಂತ ಪ್ರಭಾವಿ ಕುಟುಂಬಗಳಲ್ಲಿ ಒಂದಾಗಿರುವ ಜಾರಕಿಹೊಳಿ ಸಹೋದರರೆಲ್ಲ ಸಾಮೂಹಿಕವಾಗಿ ಜಾತ್ಯತೀತ ಜನತಾದಳ ಸೇರಲಿದ್ದಾರೆ ಎನ್ನುವ ದಟ್ಟ ಸುದ್ದಿ ಹರಡಿದೆ.

ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಯ ಲಾಭ ಪಡೆಯಲು ಮುಂದಾಗಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಜಾರಕಿಹೊಳಿ ಕುಟುಂಬದ ಮೂವರು ಶಾಸಕರನ್ನೂ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಇದಕ್ಕೆ ಕಾರಣ ಮೂವರಿಗೂ ಅವರವರ ಪಕ್ಷದಲ್ಲಿ ಆಗಿರುವ ಅವಮಾನ.

ಇದರ ಜೊತೆಗೆ, ಉತ್ತರ ಕರ್ನಾಟಕದಲ್ಲಿ ನೆಲೆಯಿಲ್ಲದ ಜೆಡಿಎಸ್, ಜಾರಕಿಹೊಳಿ ಸಹೋದರರ ಮೂಲಕ ಈ ಬಾರಿ ಒಂದಿಷ್ಟು ಸ್ಥಾನಗಳನ್ನು ಗೆದ್ದಲ್ಲಿ ಮುಂದಿನ ಸರಕಾರದಲ್ಲಿ ನಿರ್ಣಾಯಕ ಸ್ಥಾನ ಪಡೆಯಬಹುದು ಎನ್ನುವುದು ಕುಮಾರಸ್ವಾಮಿ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಬೇಕಾಗಿರುವ ನಿರ್ಣಯವೊಂದಕ್ಕೆ ಬರುವ ಮುನ್ಸೂಚನೆ ರಾಜ್ಯ ರಾಜಕಾರಣದಲ್ಲಿ ಕಾಣತೊಡಗಿದೆ.

ಮೂವರಿಗೂ ಅವಮಾನ:

ಕಳೆದ ಒಂದೂವರೆ ವರ್ಷದ ಪರಿಸ್ಥಿತಿ ಗಮನಿಸಿದರೆ ಶಾಸಕರಾಗಿರುವ ಜಾರಕಿಹೊಳಿ ಕುಟುಂಬದ ಮೂವರಿಗೂ ಅವರವರ ಪಕ್ಷದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅವಮಾನವಾಗಿದೆ. ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಮನೋಭಾವ ಅವರಲ್ಲಿ ಮೂಡುವಂತಾಗಿದೆ. ಹಾಗಾಗಿ ಅಲ್ಲಿರುವುದಕ್ಕಿಂತ ಹೊರಬಿದ್ದು ಪಾಠ ಕಲಿಸುವುದೇ ಮೇಲು ಎನ್ನುವ ನಿರ್ಧಾರಕ್ಕೆ ಸಹೋದರರೂ ಬಂದಿರುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ಥಿತ್ವ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ರಮೇಶ ಜಾರಕಿಹೊಳಿ ಸಚಿವಸ್ಥಾನ ಕಳೆದುಕೊಂಡರು. ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಲು ಮುಂದಾಳತ್ವ ವಹಿಸಿದವರೇ ರಮೇಶ ಜಾರಕಿಹೊಳಿ.

ಆದರೆ ಸಿಡಿ ಹಗರಣದಿಂದಾಗಿ ಕೆಲವೇ ದಿನಗಳಲ್ಲಿ ಸಚಿವಸ್ಥಾನ ಕಳೆದುಕೊಳ್ಳಬೇಕಾಯಿತು. ಮರಳಿ ಸಚಿವ ಸಂಪುಟ ಸೆರಬಹುದೆನ್ನುವ ಲೆಕ್ಕಾಚಾರ ಫಲಿಸಲಿಲ್ಲ. ಅಂದಿನಿಂದಲೂ ಅವರಿಗೆ ಅಧಿಕಾರವಿಲ್ಲದೆ ಇಂದು, ನಾಳೆ ಎನ್ನುತ್ತ ಕಾಲಕಳೆಯಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಅವರು ಒಳಗೊಳಗೇ ಕುದಿಯುತ್ತಿದ್ದಾರೆ. ಹಲವು ಬಾರಿ ಬಿಜೆಪಿಗೆ ವಿನಂತಿ, ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ.

ಈ ಅವಧಿಯಲ್ಲಂತೂ ಸಚಿವಸ್ಥಾನ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಮುಂದಿನ ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಭರವಸೆಯೂ ಇಲ್ಲ. ಹಾಗಾಗಿ ಈಗಲೇ ಒಂದು ನಿರ್ಣಯಕ್ಕೆ ಬರಬೇಕೆನ್ನುವ ಯೋಚನೆಯಲ್ಲಿ ರಮಶ ಜಾರಕಿಹೊಳಿ ಇದ್ದಾರೆ ಎನ್ನುವ ಸುದ್ದಿ ಕಳೆದ ಒಂದು ತಿಂಗಳಿನಿಂದಲೇ ಹರಡಿದೆ.

ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಚೆರಮನ್. ಜಾರಕಿಹೊಳಿ ಕುಟುಂಬದಲ್ಲಿ ಇಬ್ಬರಿಗೆ ಮಂತ್ರಿಸ್ಥಾನ ಕೇಳುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಬಾಲಚಂದ್ರ ಕೆಎಂಎಫ್ ಚೇರಮನ್ ಆದರು. ಕ್ರಿಯಾಶೀಲ ಕೆಲಸಗಳ ಮೂಲಕ ಕೆಎಂಎಫ್ ಗೆ ಹೊಸ ರೂಪವನ್ನೇ ನೀಡಿದರು. ಆ ಸ್ಥಾನದ ಮಹತ್ವವನ್ನು ತೋರಿಸಿದರು. ರಮೇಶ ಜಾರಕಿಹೊಳಿ ಮಂತ್ರಿಸ್ಥಾನ ಕಳೆದುಕೊಂಡಾಗ ಸಚಿವಸಂಪುಟ ಸೇರುವಂತೆ ಬಂದ ಆಹ್ವಾನವನ್ನು ಅವರು ನಿರಾಕರಿಸಿ, ರಮೇಶ ಅವರಿಗೇ ಮರಳಿ ಸ್ಥಾನ ನೀಡುವಂತೆ ಆಗ್ರಹಿಸಿದ್ದರು. ಆದರೆ ಅವರ ಮಾತಿಗೆ ಈವರೆಗೂ ಬೆಲೆ ಸಿಗಲಿಲ್ಲ.

ಜೊತೆಗೆ, ನಂದಿನಿ ಹಾಲಿನ ದರವನ್ನು ಹೆಚ್ಚಿಸುವಂತೆ ಕಳೆದ 6 ತಿಂಗಳಿನಿಂದ ಬಾಲಚಂದ್ರ ಜಾರಕಿಹೊಳಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಬಂದಿದ್ದಾರೆ. ಹಲವಾರು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕೊರೋನಾ ನಂತರ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹಾಲಿನ ದರ ಹೆಚ್ಚಿಸಿ ರೈತರಿಗೆ ಅದರ ಲಾಭ ನೀಡಬೇಕು ಎಂದು ಬಹಿರಂಗವಾಗಿಯೂ ಅನೇಕ ಬಾರಿ ವಿನಂತಿಸಿದ್ದರು.

ಕೊನೆಗೆ, ಸರಕಾರಕ್ಕೆ ಸೆಡ್ಡು ಹೊಡೆದು ಹಾಲಿನ ದರ ಏರಿಕೆಯನ್ನು ಬಹಿರಂಗವಾಗಿಯೂ ಘೋಷಿಸಿದರು. ಆದರೂ ಸರಕಾರ ಸ್ಪಂದಿಸದಿದ್ದಾಗ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಿ ಆದೇಶವನ್ನೇ ಹೊರಡಿಸಿದರು. ಆದರೆ ಇದಕ್ಕೂ ಸರಕಾರ ತಡೆ ಒಡ್ಡಿತು. ಇದರಿಂದಾಗಿ ಬಾಲಚಂದ್ರ ಜಾರಕಿಹೊಳಿ ನೊಂದಿದ್ದಾರೆ. ತಮ್ಮ ಮಾತಿಗೆ ಸರಕಾರ ಬೆಲೆ ನೀಡುತ್ತಿಲ್ಲ ಎನ್ನುವ ತೀವ್ರ ನೋವು ಅವರಲ್ಲಿದೆ.

ಸತೀಶ್ ಸ್ಥಿತಿ ಭಿನ್ನವಾಗಿಲ್ಲ

ಇದು ಬಿಜೆಪಿಯಲ್ಲಿರುವ ಇಬ್ಬರು ಶಾಸಕರ ಕಥೆಯಾದರೆ, ಕಾಂಗ್ರೆಸ್ ನಲ್ಲಿರುವ ಸತೀಶ್ ಜಾರಕಿಹೊಳಿ ಕತೆ ಭಿನ್ನವಾಗಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷ ಕಾರ್ಯಾಧ್ಯಕ್ಷ ಹುದ್ದೆಯನ್ನೇನೋ ನೀಡಿದೆ ಆದರೆ ಮತ್ತೂ ಐವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಆ ಹುದ್ದೆಯ ಗಂಭೀರತೆಯನ್ನೇ ಕಡಿಮೆ ಮಾಡಲಾಯಿತು. ಇದರ ಜೊತೆಗೆ ಈಚೆಗೆ ಹಿಂದೂ ಶಬ್ಧದ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದಾಗ ಕಾಂಗ್ರೆಸ್ ಸತೀಶ್ ಪರವಾಗಿ ನಿಲ್ಲಲಿಲ್ಲ. ಎಐಸಿಸಿ ಕರ್ನಾಟಕ ಉಸ್ತುವರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆಯ ವರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಸೇರಿದಂತೆ ಎಲ್ಲರೂ ಸತೀಶ್ ಹೇಳಿಕೆಯನ್ನು ಖಂಡಿಸಿ ಬಹಿರಂಗವಾಗಿಯೇ ಮಾತನಾಡಿದರು.

ತಮ್ಮೊಂದಿಗೆ ಈ ವಿಷಯವಾಗಿ ಚರ್ಚಿಸದೇ, ಸೌಜನ್ಯಕ್ಕೂ ತಮ್ಮ ಅಭಿಪ್ರಾಯವನ್ನು ಕೇಳದೆ ಬಹಿರಂಗವಾಗಿ ಖಂಡಿಸಿರುವುದಕ್ಕೆ ಸತೀಶ್ ಜಾರಕಿಹೊಳಿ ತೀವ್ರವಾಗಿ ಬೇಸರಗೊಂಡಿದ್ದಾರೆ. ಈ ಕುರಿತು ಬಹಿರಂಗಿ ಹೇಳಿಕೊಂಡಿದ್ದಾರೆ ಕೂಡ. ತಮ್ಮ ಹೇಳಿಕೆ ಕುರಿತು ವಿವರಣೆ ನೀಡಲು ಅವಕಾಶವಾಗದೆ ಹಿಂದಕ್ಕೆ ಪಡೆಯಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ಅವರು ನೊಂದಿದ್ದಾರೆ.

ಸತೀಶ್ ಜಾರಕಿಹೊಳಿ ಬಹಳ ಸೂಕ್ಷ್ಮ ಸ್ವಭಾವದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಅವರು ಎಂದೂ ಸಹಿಸುವುದಿಲ್ಲ. ಅಧಿಕಾರವನ್ನೂ ತ್ಯಜಿಸುತ್ತಾರೆ. ಈ ಹಿಂದೆ 2 ಬಾರಿ ಅಂತಹ ಪರಿಸ್ಥಿತಿ ಬಂದಾಗ ಸಚಿವಸ್ಥಾನಕ್ಕೇ ರಾಜಿನಾಮೆ ನೀಡಿ ಹೊರಬಂದಿದ್ದರು.

ಕುಮಾರಸ್ವಾಮಿ ಆಹ್ವಾನ

ಅವಕಾಶಕ್ಕಾಗಿ ಕಾಯುವುದರಲ್ಲಿ, ಸಣ್ಣ ಅವಕಾಶವನ್ನೂ ಲಾಭವಾಗಿಸಿಕೊಳ್ಳುವುದರಲ್ಲಿ ಕುಮಾರಸ್ವಾಮಿ ಯಾವತ್ತೂ ನಿಪುಣರು. ಅಂತಹ ಅವಕಾಶವನ್ನೇ ಬಳಸಿಕೊಂಡು 2 ಬಾರಿ ಬಹುಮತವಿಲ್ಲದಿದ್ದರೂ ಮುಖ್ಯಮಂತ್ರಿ ಹುದ್ದೆಗೇರಿದ್ದರು. ಮುಂದಿನ ಬಾರಿಯೂ ರಾಜ್ಯದಲ್ಲಿ ಅತಂತ್ರ ಸ್ಥಿತಿಯೇ ಬರಲಿದೆ. ಸರಕಾರ ರಚಿಸಬೇಕಾದರೆ ತಮ್ಮ ನೆರವು ಅನಿವಾರ್ಯ ಎನ್ನುವ ಲೆಕ್ಕಾಚಾರದಲ್ಲಿರುವ ಕುಮಾರಸ್ವಾಮಿ ಹೇಗಾದರೂ ಮಾಡಿ 40 ಸ್ಥಾನಗಳನ್ನು ಗೆಲ್ಲಲೇಬೇಕೆನ್ನುವ ಪ್ರಯತ್ನದಲ್ಲಿದ್ದಾರ. ದಕ್ಷಿಣ ಕರ್ನಾಟಕದಲ್ಲಿ ಒಂದಿಷ್ಟು ಸ್ಥಾನ ಪಡೆಯಲಿರುವ ಜೆಡಿಎಸ್, ಜಾರಕಿಹೊಳಿ ಸಹೋದರರ ಸಹಕಾರದೊಂದಿಗೆ ಉತ್ತರ ಕರ್ನಾಟಕದಲ್ಲೂ ಕೆಲವು ಸ್ಥಾನ ಗೆದ್ದಲ್ಲಿ ಮುಂದಿನ ಸರಕಾರದಲ್ಲಿ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಬಹುದು ಕುಮಾರಸ್ವಾಮಿ ಲೆಕ್ಕಾಚಾರ.

ರಮೇಶ್, ಸತೀಶ್ ಮತ್ತು ಬಾಲಚಂದ್ರ ಅವರಿಗೆ ಈಗಾಗಲೆ ಕ್ಷೇತ್ರಗಳಿವೆ. ಜೊತೆಗೆ ಸತೀಶ್ ಈ ಬಾರಿ ಪುತ್ರಿ ಪ್ರಿಯಾಂಕ ಅವರನ್ನೂ ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರೆ. ಅಲ್ಲಿಗೆ ಕುಟುಂಬದಲ್ಲೇ 4 ಶಾಸಕರಾಗುತ್ತಾರೆ ಎನ್ನುವುದು ಅವರ ಲೆಕ್ಕಾಚಾರ. ಬೆಳಗಾವಿ ಜಿಲ್ಲೆಯಲ್ಲಿ ಇನ್ನು 3 -4 ಬೆಂಬಲಿಗರನ್ನು ಗೆಲ್ಲಿಸಿ ತರಬಹುದು. ಜೊತೆಗೆ ರಾಯಚೂರು ಸೇರಿದಂತೆ ಬೇರೆ ಕಡೆ 4 -5 ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದರೆ 12 ರಿಂದ 15 ಬೆಂಬಲಿಗರೊಂದಿಗೆ ತಾವೂ ನಿರ್ಣಾಯಕ ಸ್ಥಾನಕ್ಕೆ ಬರಬಹುದು ಎನ್ನುವ ಲೆಕ್ಕಾಚಾರ ಜಾರಕಿಹೊಳಿ ಸಹೋದರರದ್ದು.  ಜೆಡಿಎಸ್ ಸೇರಿದಲ್ಲಿ ತಮ್ಮ ಯಾವುದೇ ಬೆಂಬಲಿಗರಿಗೆ ಟಿಕೆಟ್ ಸಮಸ್ಯೆ ಉದ್ಭವಿಸುವುದಿಲ್ಲ. ಕೇಳಿದಲ್ಲಿ ಸುಲಭವಾಗಿ ಸಿಗಲಿದೆ. ಕಾಂಗ್ರೆಸ್, ಬಿಜೆಪಿಯಲ್ಲಾದರೆ ಬೆಂಬಲಿಗರಿಗೆ ಕ್ಷೇತ್ರ ಸಿಗುವುದು ಕಷ್ಟ ಎನ್ನುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಣಯಕ್ಕೆ ಬಂದಿಲ್ಲ.

ಒಟ್ಟಾರೆ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುತ್ತಿದ್ದು ಅದು ಎಂದಿನಂತೆ ಬೆಳಗಾವಿ ಜಿಲ್ಲೆಯಿಂದಲೇ ಆರಂಭವಾಗುವ ಸೂಚನೆಗಳು ಕಾಣುತ್ತಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button