Belagavi NewsBelgaum NewsKannada NewsKarnataka NewsLatestLife Style

*ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ‘ನಮಾಮಿ ಗಂಗೆ’* *ವೈಜಯಂತಿ ಕಾಶಿ ಉಪಸ್ಥಿತಿಯಲ್ಲಿ ಶಾಂತಲಾ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಮನಮೋಹಕ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಗಂಗಾ ನದಿಯ ಕಥಾನಕವನ್ನು ಬಿಂಬಿಸುವ ನಮಾಮಿ ಗಂಗೆ ಎನ್ನುವ 56 ನಿಮಿಷಗಳ ಅದ್ಭುತ ನೃತ್ಯ ರೂಪಕ ಪ್ರದರ್ಶನದ ಮೂಲಕ ಬೆಳಗಾವಿಯ ಶಾಂತಲಾ ನಾಟ್ಯಾಲಯದ ವಿದ್ಯಾರ್ಥಿಗಳು ಶನಿವಾರ ಸಂಜೆ ಹೊಸ ಇತಿಹಾಸ ನಿರ್ಮಾಣ ಮಾಡಿದರು.


ಶಾಂತಲಾ ನಾಟ್ಯಾಲಯದ 36ನೇ ವಾರ್ಷಿಕೋತ್ಸವದ ನಿಮಿತ್ತ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಲೋಕಮಾನ್ಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಟ್ಯಾಲಯದ ವಿದ್ಯಾರ್ಥಿಗಳಿಂದ ವೈವಿದ್ಯಮಯ ಭರತನಾಟ್ಯ ಪ್ರದರ್ಶನದ ನಂತರ ಅತ್ಯಂತ ವಿಶೇಷವಾದ ಗಂಗಾ ನದಿಯ ಕಥೆಯನ್ನು ಹೊಂದಿರುವ ನಮಾಮಿ ಗಂಗೆ ನೃತ್ಯರೂಪಕ 21 ವಿದ್ಯಾರ್ಥಿ ಕಲಾವಿದರಿಂದ ಪ್ರದರ್ಶನವಾಯಿತು. ಇಡೀ ಸಭಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು ಮಂತ್ರಮುಗ್ಧರಾಗಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಹಿಮವಂತ ತನ್ನ ಮಗಳಾದ ಗಂಗೆಯನ್ನು ಇಂದ್ರನ ಬೇಡಿಕೆಯಂತೆ ದೇವಲೋಕಕ್ಕೆ ಕಳಿಸಿಕೊಟ್ಟಿರುವ, ರಘುವಂಶದ ಭಗೀರಥ ಮಹಾರಾಜ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ತನ್ನ ಪೂರ್ವಜರ ಮುಕ್ತಿಗಾಗಿ ಗಂಗೆಯನ್ನು ಭೂಮಿಗೆ ತಂದಿರುವ, ಗಂಗೆಯ ರಭಸವನ್ನು ತಡೆಯಲು ಶಿವನು ಧುಮುಕುವ ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿದ, ಪುನಃ ಭಗೀರಥನ ಬೇಡಿಕೆಯಂತೆ ಧರೆಗೆ ಬರುವಾಗ ಜಾಹ್ನು ಋಷಿಯು ತಡೆದಿರುವ, ಪುನಃ ಭಗೀರಥನ ಬೇಡಿಕೆಯಂತೆ ಅವಳನ್ನು ತನ್ನ ಕಿವಿದರೆಯಿಂದ ಭೂಮಿಗೆ ಬಿಟ್ಟಿರುವ, ಶಿವಪಾರ್ವತಿಯರ ಸಮಾಗಮದಿಂದ ಭ್ರೂಣ ಹುಟ್ಟಿ ಅದರ ಭಾರವನ್ನು ಗಂಗೆ ತಡೆಯುವುದೆಂದು ತಿಳಿದು ಗಂಗೆಯಲ್ಲಿ ಬಿಟ್ಟಾಗ ಅದು 6 ಚೂರಾಗಿ, ಪುನಃ ಪಾರ್ವತಿ ಅದನ್ನು ಸೇರಿಸಿ ಷಣ್ಮುಖನ ಜನನ ಆಗುವ, ಇಂದು ಮಲಿನವಾಗಿರುವ ಈ ಪವಿತ್ರ ಗಂಗೆಯ ರಕ್ಷಣೆಗಾಗಿ ತಯಾರಿಸಿದ ಯೋಜನೆಯನ್ನು ಮನಕಟ್ಟುವಂತೆ ಹೆಣೆದ ಕಥೆಯ ರೂಪಕವೇ ನಮಾಮಿ ಗಂಗೆ.

ಇಡೀ ಪ್ರದರ್ಶನ ವೀಕ್ಷಿಸಿದ ನೃತ್ಯ ಚೂಡಾಮಣಿ ವೈಜಯಂತಿ ಕಾಶಿ, ಬೆಳಗಾವಿಯಂತಹ ಸಣ್ಣ ನಗರದಲ್ಲಿ ಇಂತಹ ಅದ್ಭುತ ಪ್ರದರ್ಶನ ನಿಜಕ್ಕೂ ಸಾಹಸವೇ ಸರಿ. ಕಲಾವಿದರೊಂದಿಗೆ ಪ್ರೇಕ್ಷಕರೂ ಸೇರಿದಾಗ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಇಲ್ಲಿ ಅದು ಸಾಧ್ಯವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಗಂಗೆಯ ದರ್ಶನ ಮಾಡಬೇಕು, ಗಂಗೆಯ ಪಾವಿತ್ರ್ಯತೆ ಕಾಪಡಬೇಕು ಎನ್ನುವ ಭಾವನೆ ಎಲ್ಲರಲ್ಲಿ ಬರುವಂತಾಗಿದೆ. ಶಾಂತಲಾ ನಾಟ್ಯಾಲಯದ ಕಾರ್ಯವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ ಎಂದರು.

Home add -Advt

ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮೂಲಕ ಜೀವನ ಪರ್ಯಂತ ಕಲೆಯ ಜೊತೆಗೆ ಸಂಬಂಧ ಉಳಿಸಿಕೊಳ್ಳಿ. ಭಾವನೆ ಇದ್ದಲ್ಲಿ ಎಲ್ಲವೂ ಸಾಧ್ಯ, ಇದು ಕಲೆಯಿಂದ ಕಲಿಯಬಹುದಾದ ಅದ್ಭುತ ಸಂದೇಶ. ಮಕ್ಕಳು ಶಿಕ್ಷಕರೊಂದಿಗೆ ಒಂದಾಗಿ ಕಲೆಯನ್ನು ಬೆಳೆಸಿದಾಗ ಅದು ಯಶಸ್ಸಿಗೆ ಕಾರಣವಾಗುತ್ತದೆ. ಶಾಂತಲಾ ನಾಟ್ಯಾಲಯದ ಮಕ್ಕಳಲ್ಲಿ ಅಂತಹ ಅಪರೂಪದ ಗುಣವನ್ನು ನಾನು ಕಂಡಿದ್ದೇನೆ. ಇದರಿಂದ ಶಿಕ್ಷಕರಿಗೂ ಗೌರವ ಬರುತ್ತದೆ. ಇಲ್ಲಿನ ಶಿಕ್ಷಕಿ ರೇಖಾ ಹೆಗಡೆ ಮತ್ತು ಅವರ ಇಡೀ ಪರಿವಾರ ನಾಟ್ಯಾಲಯದ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ನನ್ನ ಹೃದಯ ತುಂಬುವಂತೆ ಮಾಡಿದೆ ಎಂದು ವೈಜಯಂತಿ ಕಾಶಿ ಪ್ರಶಂಸಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಕಲೆಯಿಂದ ಮನೊಲ್ಲಾಸವಾಗುತ್ತದೆ, ಸಮಾಜ ತಿದ್ದುವ ಕೆಲಸ ನಡೆಯುತ್ತದೆ. ಇಲ್ಲಿ ಪ್ರದರ್ಶನಗೊಂಡಿರುವ ನಮಾಮಿ ಗಂಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಚಪ್ಪಾಳೆ ಹೊಡೆಯುವುದನ್ನೂ ಮರೆಸುವಷ್ಟು ಅದ್ಭುತವಾಗಿ ನೃತ್ಯರೂಪಕ ಪ್ರದರ್ಶನಗೊಂಡಿದೆ. ಇಲಾಖೆಯಿಂದ ಶಾತಲಾ ನಾಟ್ಯಾಲಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಮಾತನಾಡಿ, ನಮಾಮಿ ಗಂಗೆ ಬೆಳಗಾವಿಯಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈ ನೃತ್ಯ ರೂಪಕದ ಹಿಂದಿನ ಶ್ರಮಕ್ಕೆ ಎಷ್ಟು ಪ್ರಶಂಸೆ ವ್ಯಕ್ತಪಡಿಸಿದರೂ ಸಾಲದು. ಮೈಸೂರು ದಸರಾ, ಕಿತ್ತೂರು ಉತ್ಸವದಂತಹ ದೊಡ್ಡ ವೇದಿಕೆಗಳಲ್ಲಿ ಇಂತಹ ನೃತ್ಯ ರೂಪಕಗಳು ಪ್ರದರ್ಶನವಾಗಬೇಕು ಎಂದರು.


ಶಾಂತಲಾ ನಾಟ್ಯಾಲಯ ಕಳೆದ 36 ವರ್ಷಗಳಿಂದ ಬೆಳಗಾವಿಯಲ್ಲಿ ಮಾಡಿರುವ ಸಾಧನೆ ಅದ್ಭುತವಾಗಿದೆ. ನಾಟ್ಯಾಲಯ ಸ್ಥಾಪನೆ ಮಾಡಿರುವ ಶ್ರೀಮತಿ ಹೆಗಡೆಯವರ ತ್ಯಾಗ, ಶ್ರಮ ನಮಗೆಲ್ಲ ಆದರ್ಶ. ಯಾವುದೇ ಸಾಧನೆ ಹೂವಿನ ಹಾಸಿಗೆಯಾಗಿರುವುದಿಲ್ಲ. ಅದರ ಹಿಂದೆ ಸಾಕಷ್ಟು ಹೋರಾಟ, ಅವಮಾನ, ಆರೋಪಗಳಿರುತ್ತವೆ. ಎಲ್ಲವನ್ನೂ ಎದುರಿಸಿ, ಸಹಿಸಿಕೊಂಡು ಈ ಮಟ್ಟಿಗೆ ಸಂಸ್ಥೆಯನ್ನು ಬೆಳೆಸಿರುವುದು ಮೆಚ್ಚಬೇಕಾದ ವಿಷಯ ಎಂದು ಅವರು ಹೇಳಿದರು. ಪ್ರಗತಿ ಮೀಡಿಯಾ ಹೌಸ್ ಪರವಾಗಿ ಶ್ರೀಮತಿ ಹೆಗಡೆಯವರನ್ನು ಎಂ.ಕೆ.ಹೆಗಡೆ ಮತ್ತು ಶುಭಾ ಹೆಗಡೆ ಸನ್ಮಾನಿಸಿದರು.


ಗೋವಾದ ಸ್ಯಾಂಕ್ವೇಲಿಯಂ ನಗರಸಭೆ ಚೇರಮನ್ ಸಿದ್ಧಿ ಸಂದೇಶ ಪ್ರಭು ಮಾತನಾಡಿ, ನಮಾಮಿ ಗಂಗೆಯಂತಹ ಅದ್ಭುತ ನೃತ್ಯವನ್ನು ನಾನು ಎಂದಿಗೂ ನೋಡಿಲ್ಲ. ಇದನ್ನು ಹಿಂದಿಗೆ ಅನುವಾದಿಸಿದರೆ ಗೋವಾದಲ್ಲೂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಶಾಂತಲಾ ನಾಟ್ಯಾಲಯದ ಮುಖ್ಯಸ್ಥೆ ರೇಖಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ಮತ್ತು ಡಾ.ವಿಶಾಖಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ನಾಟ್ಯಾಲಯದ ಸ್ಥಾಪಕಿ ಶ್ರೀಮತಿ ಹೆಗಡೆ, ನಿರ್ದೇಶಕ ಬಿ.ಕೆ.ಅಶೋಕ, ಎಂ.ಜಿ.ರಾವ್, ರವೀಂದ್ರ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button