*ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದ ಶರದ್ ಪವಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಶರದ ಪವಾರ ಅವರು, ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆಯನ್ನು ವೀಕ್ಷಿಸಿದ ಅವರು, ನಾನೇ 2011ರಲ್ಲಿ ಈ ಆಸ್ಪತ್ರೆಗೆ ಭೂಮಿ ನೆರವೇರಿಸಿದ್ದೆ. ಈಗ ಅತ್ಯಾಧುನಿಕತೆಯಿಂದ ಕೂಡಿರುವ ಆಸ್ಪತ್ರೆ ಮೈದೆಳೆದು ನಿಂತಿದೆ. ಇಂತ ನಗರಗಳಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಸಕಲ ರೀತಿಯ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ನೋಡಿ ಬಹಳ ಖುಷಿಯಾಯಿತು. ಈ ರೀತಿಯ ಕಟ್ಟಡ ಹಾಗೂ ವಿನ್ಯಾಸ ಬಹಳ ಸುಂದರವಾಗಿದ್ದು, ರೋಗಿಗಳ ಸ್ನೇಹಿಯಾಗಲಿದೆ. ಅಲ್ಲದೆ ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿಯಾಗಲಿದೆ ಎಂದರು.
ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಎಲ್ಲ ಕಾಮಗಾರಿಗಳು ಮುಗಿದಿವೆ, ಈಗಾಗಲೇ ಒಂದು ವಿಭಾಗವನ್ನು ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಆಸ್ಪತ್ರೆಯು ಜನಸೇವೆಗೆ ತೆರೆದುಕೊಳ್ಳಲಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಕ್ಯಾನ್ಸರ್ ಗೆ ಸಮಗ್ರ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರಗಳ ಅವಶ್ಯಕತೆ ಬಹಳವಿತ್ತು. ಅದನ್ನು ಅರಿತು ಒಂದೇ ಸೂರಿನಡಿ ಎಲ್ಲ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಸುಮಾರು 300 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕೆಲವೇ ದಿನಗಳಲ್ಲಿ ಜನಸೇವೆ ಅರ್ಪಿಸಲಾಗುವದು ಎಂದು ಹೇಳಿದರು.
ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಆಸ್ಪತ್ರೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಡಾ. ವಿ ಎಸ್ ಸಾಧುನವರ, ಕಾಹೆರ್ ಉಪಕುಲಪತಿ ಡಾ. ನಿತಿನ ಗಂಗಾಣೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ನವೀನ ಎನ್ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ