Kannada NewsLatestNational

*ಜೈಲಿನಲ್ಲಿದ್ದುಕೊಂಡೇ ವಿವಾದಾತ್ಮಕ ಸಂದರ್ಶನ ನೀಡಿದ ಶರ್ಜಿಲ್ ಇಮಾಮ್*: *ಯಾರೀತ?*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ತಿಹಾರ್ ಜೈಲಿನಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್, ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ದೇಶಾದ್ಯಂತ ವ್ಯಾಪಕ ರಾಜಕೀಯ ಮತ್ತು ಸೈದ್ಧಾಂತಿಕ ಚರ್ಚೆಗೆ ಕಾರಣವಾಗಿದೆ.

ಸಂದರ್ಶನದಲ್ಲಿ ಭಾರತದ ಪ್ರಮುಖ ಸಾಂವಿಧಾನಿಕ ತತ್ವಗಳನ್ನು ಪ್ರಶ್ನಿಸಿರುವ ಇಮಾಮ್, ದೇಶದಲ್ಲಿ ಮುಸ್ಲಿಮರಿಗೆ ರಾಜಕೀಯ ಅಧಿಕಾರ ದಕ್ಕದಂತೆ ಮಾಡುವಲ್ಲಿ ಉದಾರವಾದಿಗಳು ಮತ್ತು ಹಿಂದುತ್ವ ಬೆಂಬಲಿಗರು ಇಬ್ಬರೂ ಒಂದೇ ರೀತಿಯ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹೇಳಿಕೆಯನ್ನು ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಕಟುವಾಗಿ ಟೀಕಿಸಿದ್ದು, ಇದನ್ನು ನೇರವಾಗಿ ‘ಇಸ್ಲಾಮಿಸ್ಟ್ ಪ್ರಣಾಳಿಕೆ’ ಎಂದು ಕರೆದಿದ್ದಾರೆ. ಅಲ್ಲದೆ, ಇಂತಹ ಕಲ್ಪನೆಗಳ ವಿರುದ್ಧ ಧ್ವನಿ ಎತ್ತದ ಉದಾರವಾದಿ ಸಮುದಾಯದ ಮೌನವನ್ನು ಅವರು ಪ್ರಶ್ನಿಸಿದ್ದಾರೆ. ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರತಿಕ್ರಿಯಿಸಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಕರೆಂದು ಹೇಳಿಕೊಳ್ಳುವವರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಮರ್ಶಕರು ಈ ಹೇಳಿಕೆಯನ್ನು ದೇಶ ವಿಭಜನೆಯ ಕಾಲದ ಪ್ರತ್ಯೇಕತಾವಾದಿ ಧೋರಣೆಗೆ ಹೋಲಿಸುತ್ತಿದ್ದರೆ, ಅವರ ಬೆಂಬಲಿಗರು ಮಾತ್ರ ಯಾವುದೇ ವಿಚಾರಣೆ ಪೂರ್ಣಗೊಳ್ಳದೆ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರಿಸಿದ್ದರ ಹತಾಶೆ ಈ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ವಾದಿಸುತ್ತಿದ್ದಾರೆ.

ಬಿಹಾರ ಮೂಲದ ಶರ್ಜೀಲ್ ಇಮಾಮ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸಂಶೋಧನಾ ವಿದ್ಯಾರ್ಥಿಯಾಗಿದ್ದ. ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಈತ, 2019-2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರುದ್ಧ ನಡೆದ ಶಾಹೀನ್ ಬಾಗ್ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

2020ರ ಜನವರಿಯಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಮಾತನಾಡುತ್ತಾ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳಿಂದ ಕಡಿದುಹಾಕುವ ಕರೆ ನೀಡಿದ್ದ ಎಂಬ ಆರೋಪ ಇವರ ಮೇಲಿದೆ. ಈ ಭಾಷಣದ ಹಿನ್ನೆಲೆಯಲ್ಲಿ ದೇಶದ್ರೋಹ, ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ 2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಸಂಚಿನ ಆರೋಪದಡಿ ದೆಹಲಿ ಪೊಲೀಸರು ಇವರನ್ನು ಬಂಧಿಸಿದ್ದು, ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button