ಪ್ರಗತಿವಾಹಿನಿ ಸುದ್ದಿ, ಕಾರವಾರ -: ವಿಶ್ವಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೋನಾ ವೈರಸ್ ನ ನಿಯಂತ್ರಣ ಸರ್ಕಾರದೊಂದಿಗೆ ಪ್ರತಿಯೊಬ್ಬ ವ್ಯಕ್ತಿಯೂ ಸಹಕರಿಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಕೋವಿಡ್-೧೯ ಸೋಂಕು ತಡೆಗಟ್ಟುವಿಕೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಕುರಿತು ಜನಪ್ರತಿನಿದಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು ಮಾತನಾಡಿದರು.
ಕೋರೊನಾ ಸೋಂಕು ಕೂಲಿಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೂ ಪೆಟ್ಟು ನೀಡಿದೆ. ಕೇಂದ್ರ ಸರಕಾರವು ನೆರವಿಗೆ ಪ್ಯಾಕೇಜ್ ನೀಡಿದ್ದು ಇದು ಸಂಜೀವಿನಿಯಂತೆ ಚೇತರಿಕೆ ನೀಡಲಿದೆ. ಕರೋನಾ ಸೋಂಕು ತಡೆಗಟ್ಟಲು ಮುಖ್ಯವಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೊರ ದೇಶ, ಹೊರ ರಾಜ್ಯ, ಜಿಲ್ಲೆಗಳಿಂದ ಬಂದು ಗೃಹ ನಿರ್ಬಂಧದಲ್ಲಿರುವವರು ಕಡ್ಡಾಯವಾಗಿ ನಿತ್ಯ ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದು ಸೂಚಿಸಿದರು.
ಜನರ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು. ಇದರ ಕುರಿತು ಅಧಿಕಾರಿಗಳು ಕೂಡ ತಿಳವಳಿಕೆ ನೀಡಬೇಕು. ಯಾವುದೇ ಹಣಕಾಸಿನ ತೊಂದರೆ ಇಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯತೆ ಯಿಂದ ಕಾರ್ಯ ನಿರ್ವಹಿಸಬೇಕೆಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಧಾನಿಯವರು ಘೋಷಿಸಿರುವ ಪ್ಯಾಕೇಜ ನಲ್ಲಿ ಮೀನುಗಾರರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದಾಗ ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಕಾರವಾರ ಅಂಕೋಲಾ ಶಾಸಕಿ ರೂಪಾಲಿ ಎಸ್ ನಾಯ್ಕ್ ಅವರು ಕಲ್ಲಂಗಡಿ ಬೆಳೆದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಾಗ ಜಿಲ್ಲಾ ಉಸ್ತುವಾರಿ ಸಚಿವೆ ಇದರ ಬಗ್ಗೆ ಗೋವಾ ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡಿ ಎಂದರು
ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಮಾತನಾಡಿ, ಮಾರ್ಚ್ 15 ರ ನಂತರ ವಿದೇಶದಿಂದ ಹಿಂದಿರುಗಿದ ಭಟ್ಕಳ ಜನರನ್ನು ಅವರ ಕುಟುಂಬದವರಿಗೆ ಹರಡುವಿಕೆ ತಡೆಯಲು ಪ್ರತ್ಯೇಕ ಕ್ವಾರೆಂಟೈನ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಎಲ್ಲಾ ಗುರುತಿಸಲಾದ ಪ್ರಾಥಮಿಕ ಹಂತದ ಸಂಪರ್ಕಿತರನ್ನು ಈಗಾಗಲೇ ಸರ್ಕಾರಿ ಕ್ವಾರಂಟೈನ್ ದಲ್ಲಿ ಇಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ರೋಶನ್ ಜಿಲ್ಲಾ ಅರೋಗ್ಯಾಧಿಕಾರಿ ಡಾ. ಜಿ. ಎನ್. ಅಶೋಕ ಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ