*ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತಪರವಾದ 18 ಯೋಜನೆಗಳನ್ನು ಸ್ಥಗಿತಗೊಳಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ನಿಪ್ಪಾಣಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ರೈತ ಮೋರ್ಚಾ ಪದಾಧಿಕಾರಿಗಳು ನಿಪ್ಪಾಣಿ ನಗರದ ಚೆನ್ನಮ್ಮ ವೃತ್ತದಲ್ಲಿ ಸಭೆ ಸೇರಿಸಿ ಅಲ್ಲಿಂದ ತಹಶೀಲ್ದಾರ ಕಚೇರಿಯವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋ ಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಅಂತಹ ಪೂಜ್ಯನೀಯ ಗೋಮಾತೆಯನ್ನು ಅಕ್ರಮವಾಗಿ ಗೋ ಸಾಗಾಣಿಕೆದಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಿಂಪಡೆಯಲು ನಿರ್ಧರಿಸಿದೆ. ರಾಜ್ಯದ ೫೦ ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ ೧೦ ಸಾವಿರ ಹೆಚ್ಚುವರಿ ಸಹಾಯಧನ ನೀಡುವ ಹಿಂದಿನ ಸರ್ಕಾರ ನಿರ್ಣಯವನ್ನು ರದ್ದು ಪಡಿಸಲಾಗುತ್ತಿವೆ. ಕೇಂದ್ರ ಸರ್ಕಾರದ ಜೊತೆ ಬಿಜೆಪಿ ರಾಜ್ಯ ಸರ್ಕಾರ ಕೂಡ ಸುಮಾರು ೫೧ ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ಕಿಸಾನ್ ಸಮ್ಮಾನ್ ನಿಧಿಯೋಜನೆ ಜಾರಿಗೆ ತಂದಿದ್ದನ್ನು ತಡೆ ಹಿಡಿಯುತ್ತಿದೆ. ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ತಂತ್ರಜ್ಞಾನ ಮತ್ತು ಕೃಷಿ ಕಾರ್ಯಕ್ಕೆ ಹೊಸ ಆಯಾಮ ನೀಡಬಹುದು ಎಂದು ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ತಂದಿತ್ತು. ಆದರೆ ಸಿದ್ಧರಾಮಯ್ಯನವರ ಕಾಂಗ್ರೇಸ ಸರ್ಕಾರ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ೨೩ ಸಾವಿರ ಕೋಟಿ ಅನುದಾನ ಒದಗಿಸಿದ್ದು, ಅದನ್ನು ಈಗ ೧೯ ಸಾವಿರ ಕೋಟಿಗೆ ಇಳಿಸಿ, ರೈತರಿಗೆ ಅನ್ಯಾಯವೆಸಗಿದೆ. ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡದೆ ಕಾಂಗ್ರೇಸ್ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಟಂಟ್ ಆಗಿದೆ ಎಂದರು.
ರಾಜ್ಯದ ೨೪.೬೭ ಲಕ್ಷ, ಹಾಲು ಉತ್ಪಾದಕರಿಗೆ ಅನುಕೂಲವಾಗಲು ಸಾವಿರ ಕೋಟಿ ಅನುದಾನದಡಿ ಸ್ಥಾಪಿಸಿದ್ದ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದುಗೊಳಿಸಲು ನಿರ್ಧರಿಸಿದೆ. ಬಿಜೆಪಿ ಸರ್ಕಾರ ಬಜೆಟಿನಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಡಿಬಿಟಿ ಮೂಲಕ ಮಾಸಿಕ ರೂ. ೫೦೦ ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ರದ್ದುಗೊಳಿಸಲು ನಿರ್ಣಯಿಸಿದೆ. ಹೀಗೆ ಜೀವನ್ ಜ್ಯೋತಿ ವಿಮಾ ಯೋಜನೆ, ರೈತ ಉತ್ಪಾದಕ ಸಂಸ್ಥೆ, ರೈತ ಸಂಪದ ಯೋಜನೆ, ಸಹಸ್ಯ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲಭ್ಯ, ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್, ಕನಿಷ್ಠ ಬೆಂಬಲ ಬೆಲೆ ಯೋಜನೆ,
ಮುಂಗಾರು ವೈಫಲ್ಯವಾಗಿ ಎರಡೇ ತಿಂಗಳಲ್ಲಿ ೪೨ ಜನ ರೈತರ ಆತ್ಮಹತ್ಯೆಯಾಗಿದೆ, ಆದರೆ ಕಾಂಗ್ರೆಸ್ ಸರ್ಕಾರ ವಾರೆಂಟ್ ಇಲ್ಲದ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡುವ ಬಗ್ಗೆ ಗೊಂದಲಕ್ಕೀಡಾಗಿದ್ದು, ರಾಜ್ಯದ ಮುಗ್ಧ ಜನರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾಧ್ಯಕ್ಷ ಡಾ,ರಾಜೇಶ ನೇರ್ಲಿ ಸೇರಿದಂತೆ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಮತ್ತು ನಗರಸಭೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ