
ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಶಶಿಕುಮಾರ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಸೌಜನ್ಯ ಪರ ಹೋರಾಟಗಾರರು ಮತ್ತು ಕುಟುಂಬದವರು ಶಶಿಕುಮಾರ್ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಶಶಿಕುಮಾರ್ ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಧರ್ಮಸ್ಥಳದೊಂದಿಗೆ ಹೊಂದಿದ್ದ ಸಂಪರ್ಕವನ್ನು ಉಲ್ಲೇಖಿಸಿ ಸೌಜನ್ಯ ಪರ ಹೋರಾಟಗಾರರು ಎಸ್‌ಐಟಿ ಮುಖ್ಯಸ್ಥರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ತನಿಖೆಯ ಮೂಲಕ ನ್ಯಾಯ ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಹೋರಾಟಗಾರರು, ತನಿಖೆಯ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು.
ಈ ವಿವಾದಗಳು ತನಿಖೆಯ ಪಾರದರ್ಶಕತೆಯ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಶಶಿಕುಮಾರ್ ಸ್ವಯಂಪ್ರೇರಿತರಾಗಿ ತನಿಖೆಯ ಹೊಣೆಯಿಂದ ತಮ್ಮನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಶಶಿಕುಮಾರ್ ಮನವಿಯ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಹೊಸ ಮುಖ್ಯಸ್ಥರನ್ನು ನೇಮಿಸುವ ಕುರಿತು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಐಜಿಪಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್ ಹಾಗೂ ಡಾ. ಬೋರಲಿಂಗಯ್ಯ ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿವೆ.
ಸೌಜನ್ಯ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಚುರುಕಾಗಿ ಮುಂದುವರಿಸಬಲ್ಲ ಅಧಿಕಾರಿಗೆ ಹೊಣೆಗಾರಿಕೆ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹೊಸ ಮುಖ್ಯಸ್ಥರ ನೇಮಕದ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




