Latest

ರಾತ್ರಿ 2.30ಕ್ಕೆ ಕುರಿಗಾಹಿಗಳ, ಬೆಳಿಗ್ಗೆ ಕುರಿಗಳ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ತಾಳಿಕೋಟೆ -ತಾಳಿಕೋಟೆ, ಪಟ್ಟಣಕ್ಕೆ ಹೊಂದಿಕೊಂಡು ಹರಿಯುವ ಡೋಣಿ ನದಿಯಲ್ಲಿ ಸೋಮವಾರ ಸಾಯಂಕಾಲ ಪ್ರವಾಹವು ಕಾಣಿಸಿಕೊಂಡು ಕುರಿ ಮೇಯಿಸಲು ಹೋಗಿದ್ದ ನಡುಗಡ್ಡೆಯ ಕಾಮನಕಲ್ಲ ಪ್ರದೇಶದಲ್ಲಿ ೩ ಜನ ಕುರಿಗಾಹಿಗಳು ೩೦೦ ಕುರಿಗಳು, ೪ ನಾಯಿಗಳು ಸಿಕ್ಕಿಕೊಂಡಿದ್ದವು.

 ತಾಲೂಕಾಡಳಿತದ ಅಧಿಕಾರಿಗಳು, ಜಿಲ್ಲಾವಿಪತ್ತು ನಿರ್ವಹಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಾಹ್ನದ ವರೆಗೆ ದೋಣಿನದಿಯ ದಡದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಗರು ಸಾಯಂಕಾಲ ೫ ಘಂಟೆಯ ಸುಮಾರಿಗೆ ನದಿಯ ನಡುಗಡ್ಡೆಯ ಎತ್ತರ ಪ್ರದೇಶವಾದ ಕಾಮನಕಲ್ಲ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುತ್ತಾ ಕುಳಿತುಕೊಂಡಾಗ ಏಕಾಏಕಿ ನಧಿಯಲ್ಲಿ ಪ್ರವಾಹ ಕಾಣಿಸಿಕೊಂಡು ಕಾಮನಕಲ್ಲ ಪ್ರದೇಶವನ್ನು ನೀರು ಸುತ್ತುವರೆದ ಪರಿಣಾಮ ಕುರಿಗಾಹಿಗಳ ಭಯಭೀತರಾಗಿ ಕುರಿಗಳ ಸಮೇತ ಸಿಲುಕಿಕೊಂಡಿದ್ದರು.
ನಡುಗಡ್ಡೆಯಲ್ಲಿ ಸಿಲುಕಿಕೊಂಡ ಮಿಣಜಗಿ ಗ್ರಾಮದ ಗುರಿಗಾಹಿಗಳಾದ ರಮೇಶ ಪೂಜಾರಿ, ಮಾನಪ್ಪ ರಾಠೋಡ, ಹಣಮಂತ ರಾಠೋಡ, ಎಂಬರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ರಾತ್ರಿ ೨-೩೦ ಘಂಟೆಯ ಸುಮಾರಿಗೆ ಬೋಟುಗಳ ಸಹಾಯದಿಂದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.

ಮಂಗಳವಾರ ಬೆಳಿಗ್ಗೆ ೬ ಘಂಟೆಯ ಹೊತ್ತಿಗೆ ನದಿಯಲ್ಲಿ ನೀರು ಇಳಿಮುಖಗೊಂಡಿದ್ದರಿಂದ ಬೆಳಿಗ್ಗೆ ೬ ಘಂಟೆಯಿಂದ ೯ ಘಂಟೆಯವರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಈಜುಗಾರರ ಸಹಕಾರದೊಂದಿಗೆ ಕಾಮನಕಲ್ಲ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ೩೦೦ ಕುರಿಗಳನ್ನು ಹಾಗೂ ೪ ನಾಯಿಗಳನ್ನು ರಕ್ಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಜತ್ತ ತಾಲೂಕಿನಿಂದ ಹರಿಯುವ ಈ ಡೋಣಿ ನದಿಗೆ ಮಹಾರಾಷ್ಟ್ರ ಅಲ್ಲದೇ ವಿಜಯಪುರ ಜಿಲ್ಲೆಯ ಯಾವುದೇ ಭಾಗದಲ್ಲಿ  ಮಳೆಯಾದರೂ ಪ್ರವಾಹ ಮಾತ್ರ ತಪ್ಪಿದಲ್ಲ. ಯಾವ ಸಮಯದಲ್ಲಿ ನದಿಯಲ್ಲಿ ನೀರು ಬರುತ್ತದೆಯೋ ಯಾವ ಸಮಯದಲ್ಲಿ ನೀರು ಕಡಿಮೆಯಾಗುತ್ತವೆಂಬುದು ಯಾರಿಗೂ ತಿಳಿಯುವದಿಲ್ಲ. ಆದರೆ ನದಿಯ ದಡದಲ್ಲಿ ದನಕರಗಳನ್ನು, ಕುರಿಗಳನ್ನು ಮೇಯಿಸಲು ಹೋಗುವುದನ್ನು ಮಾತ್ರ ಯಾರೂ ನಿಲ್ಲಿಸಿಲ್ಲ. ಕಾಮನಕಲ್ಲ ಪ್ರದೇಶವೆಂಬುದು ಡೋಣಿ ನದಿಯ ನಡುಗಡ್ಡೆಯಲ್ಲಿ ಮೊದಲಿನಿಂದಲೂ ಬೃಹತ್ ಬಂಡೆ ಇದ್ದು ಈ ಪ್ರದೇಶದಲ್ಲಿ ಬೆಸಿಗೆಯಲ್ಲಿಯೂ ಹಚ್ಚ ಹಸಿರು ಕಸಬೆಳೆಯುತ್ತದೆ ಎಂಬ ಕಾರಣಕ್ಕೆ ದನಕರುಗಳನ್ನು ಮೇಯಿಸಲು ಹೋಗುವುದು ಸಾಮಾನ್ಯ.
ರಾತ್ರಿ ಸಮಯದಲ್ಲಿ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕಾಮನಕಲ್ಲ ಪ್ರದೇಶ ಸಂಪೂರ್ಣ ಮುಳಗುವದರ ಜೊತೆಗೆ ಇದರಲ್ಲಿದ್ದ ೩ ಜನ ಕುರಿಗಾಹಿಗಳನ್ನೋಳಗೊಂಡು ೩೦೦ ಕುರಿಗಳು, ೪ ನಾಯಿಗಳು ನೀರಿನಲ್ಲಿ ಕೊಚ್ಚಿಹೋಗುವ ಸಾದ್ಯತೆಯೇ ಹೆಚ್ಚಾಗಿತ್ತು.
ಆದರೆ ತಹಶಿಲ್ದಾರ ಅನೀಲಕುಮಾರ ಢವಳಗಿ, ಪಿ.ಎಸ್.ಆಯ್.ವಸಂತ ಬಂಡಗಾರ, ಅಗ್ನಿ ಶಾಮಕದಳದ ಅಧಿಕಾರಿಗಳು ರಾತ್ರಿಹೊತ್ತು ವಿಪರೀತ ಮಳೆ ಸುರಿಯುತ್ತಿದ್ದರೂ ಮಳೆಯಲ್ಲಿಯೇ ನೆನೆದು ಅವರ ರಕ್ಷಣೆಗೆ ಎಲ್ಲರೀತಿಯ ಕಾರ್ಯಚರಣೆಗೆ ತಯಾರಿಯನ್ನು ನಡೆಸುತ್ತಿದ್ದರು. ರಾತ್ರಿ ೨ ಘಂಟೆಗೆ ಬೋಟ್ ಗಳೊಂದಿಗೆ ಆಗಮಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ವಿಜಯಪುರದ ಬೇಗಂ ತಲಾಬನಲ್ಲಿರುವ ಬೋಟ್ ಗಳೊಂದಿಗೆ ಆಗಮಿಸಿ ಕಾಮನಕಲ್ಲ ಪ್ರದೇಶಕ್ಕೆ ತೆರಳಿ ೩ ಜನ ಕುರಿಗಾಹಿಗಳನ್ನು ರಕ್ಷಣೆ ಮಾಡಿದರು.
ಬೆಳಿಗ್ಗೆ ಹೊತ್ತಿನವರೆಗೆ ಡೋಣಿ ನದಿಯಲ್ಲಿ ನೀರು ಇಳಿಮುಖವಾಗಿದ್ದರಿಂದ ಕಾಮನಕಲ್ಲ ಪ್ರದೇಶದ ಗಿಡೊಂದಕ್ಕೆ ಹಗ್ಗವನ್ನು ಕಟ್ಟಿ ಕುರಿಗಳನ್ನು ಹಾಗೂ ನಾಯಿಗಳನ್ನು ರಕ್ಷಣೆ ಮಾಡಿದರು.

 ಮತ್ತೆ ಏರಿದ ಪ್ರವಾಹ

ನದಿಯ ನಡುಗಡ್ಡೆಯ ಕಾಮನಕಲ್ಲ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿಗಳ ಜೊತೆಗೆ ೩೦೦ ಕುರಿಗಳು ಹಾಗೂ ೪ ನಾಯಿಗಳ ರಕ್ಷಣಾ ಕಾರ್ಯಚರಣೆ ಮುಗಿದ ೧ ಘಂಟೆಯಲ್ಲಿಯೇ ನದಿಯಲ್ಲಿ ನೀರಿನ ಪ್ರವಾಹ ಏರತೊಡಗಿತು.

ರಾತ್ರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ  ಮತ್ತೆ ಮಳೆ ಸುರಿದಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಏರುವ ಮುನ್ಸೂಚನೆಯ ಮೇರೆಗೆ ತಡಮಾಡದೇ ಬಿಡುವಿಲ್ಲದೇ ರಕ್ಷಣೆ ಕಾರ್ಯಚರಣೆ ನಡೆಸಿದ ತಾಲೂಕಾಡಳಿತದ ಅಧಿಕಾರಿಗಳು, ಪೊಲೀಸ್ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗಳು ಜನರ ಪ್ರಶಂಸೆಗೆ ಕಾರಣರಾದರು.

ಪ್ರವಾಹದ ಮಧ್ಯೆ ಸಿಲುಕಿದ 300 ಕುರಿ 3 ಜನ ಕುರಿಗಾಹಿಗಳು

ತಾಲೂಕಾಡಳಿತದ ಎಲ್ಲ ಅಧಿಕಾರಿಗಳಿಗೆ ಅನಾಹುತ ಆಗುವ ಮುಂಚೆಯೇ ಕುರಿಗಾಹಿಗಳನ್ನು ಹಾಗೂ ಕುರಿಗಳನ್ನು ರಕ್ಷಣೆ ಮಾಡಿ ಎಂದು ಆದೇಶ ಮಾಡಿದ್ದೆ. ರಾತ್ರಿಯಿಡಿ ಮಳೆ ಬರುತ್ತಿದ್ದರೂ ಅದನ್ನು ಲೇಕ್ಕಿಸದೇ ತಾಲೂಕಾಡಳಿತದ ಅಧಿಕಾರಿಗಳು, ಪೊಲೀಸ್‌ರು, ಅಗ್ನಿಶಾಮಕದಳದವರು ಮಳೆಯಲ್ಲಿಯೇ ನೆನೆಯುತ್ತಾ ರಕ್ಷಣಾ ಕಾರ್ಯಚರಣೆಯನ್ನು ಮಾಡಿದ್ದಾರೆ. ಅವರ ಈ ಕಾರ್ಯವನ್ನು ಶ್ಲಾಘಿಸುತ್ತೇನೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ಪ್ರದೇಶಗಳು ಎಲ್ಲೆಲ್ಲಿದ್ದಾವೋ ಅವುಗಳನ್ನು ಗುರುತಿಸಿ ಅಂತಹ ಪ್ರದೇಶದಲ್ಲಿ ಯಾರೂ ಹೋಗದಂತೆ ಏನು ಕ್ರಮಕೈಗೊಳ್ಳಕ್ಕಾಗುತ್ತದೆ ಅದನ್ನು ಮಾಡಿ ಎಂದು ತಾಲೂಕಾಡಳಿತದ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ.

-ಎ.ಎಸ್.ಪಾಟೀಲ(ನಡಹಳ್ಳಿ) ಶಾಸಕರು.

ಕಳೆದೊಂದು ವಾರದಿಂದ ಡೋಣಿ ನದಿಯಲ್ಲಿ ಪ್ರವಾಹ ಬಂದಿದ್ದಿಲ್ಲ. ಮಳೆ ನಿಂತಿದೆ ನೀರು ಬರೋದಿಲ್ಲಾವೆಂದು ಕುರಿಗಳನ್ನು ಮೇಯಿಸಲು ಸಾಯಂಕಾಲ ೪ ಘಂಟೆಗೆ ಕಾಮನಕಲ್ಲ ಪ್ರದೇಶಕ್ಕೆ ಹೋಗಿದ್ದೆವು. ಸ್ವಲ್ಪ ಹೊತ್ತಿನ ನಂತರ ಪ್ರದೇಶದಿಂದ ಎದ್ದು ನೋಡುವಷ್ಠರಲ್ಲಿಯೇ ಕಾಮನಕಲ್ಲ ಪ್ರದೇಶವನ್ನು ನೀರು ಸುತ್ತುವರೆದಿತ್ತು. ಇತ್ತ ದಡವು ಕಾಣದೇ ಕುರಿಗಳೊಂದಿಗೆ ಕೊಚ್ಚಿ ಹೋದೆವೆಂದು ಭಯದಲ್ಲಿದ್ದೆವು. ಆದರೆ ದೇವರು ದೊಡ್ಡವನು. ನನ್ನ ಜೀವದ ಜೊತೆಗೆ ಜೀವನಕ್ಕೆ ಆಸರೆಯಾಗಿದ್ದ ಕುರಿಗಳನ್ನೂ ಸಹ ಅಧಿಕಾರಿಗಳು ಬದುಕಿಸಿಕೊಟ್ಟಿದ್ದಾರೆ. ಅವರ ಋಣ ಜೀವನದಲ್ಲಿ ಮರೆಯುವುದಿಲ್ಲಾ.

-ರಮೇಶ ಪೂಜಾರಿ, ಮಿಣಜಗಿ ಗ್ರಾಮದ ಕುರಿಗಾಹಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button