ಬಿಜೆಪಿ, ಸಂಘ ಪರಿವಾರದ ವಿರೋಧದ ಮಧ್ಯೆಯೂ ಟಿಕೆಟ್ ಗಿಟ್ಟಿಸಿದ ಶೆಟ್ಟರ್!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಂಘ ಪರಿವಾರ ಮತ್ತು ಬಿಜೆಪಿಯ ಸ್ಥಳೀಯ ಮುಖಂಡರು, ಕಾರ್ಯಕರ್ತರ ತೀವ್ರ ವಿರೋಧದ ಮಧ್ಯೆಯೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ಗೆ ಜಿಗಿದು, ಹುಬ್ಬಳ್ಳಿಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿ ಹೀನಾಯವಾಗಿ ಸೋಲನುಭವಿಸಿದ್ದ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರಗಿನವರಿಗೆ ಯಾವುದೇ ಕಾರಣದಿಂದ ಟಿಕೆಟ್ ನೀಡಬಾರದು, ಅದರಲ್ಲೂ ಪಕ್ಷ ಬಿಟ್ಟುಹೋಗಿ, ಪಕ್ಷದ ವಿರುದ್ಧ ಏನೆಲ್ಲ ಮಾತನಾಡಿದ್ದ ಶೆಟ್ಟರ್ ಗೆ ಟಿಕೆಟ್ ಕೊಡಲೇ ಬಾರದು ಎಂದು ಬಿಜೆಪಿಯ ಬೆಳಗಾವಿ ಮುಖಂಡರು ಸಭೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಂತೂ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದರು.
ಸಂಘಪರಿವಾರದ ಮುಖಂಡರೂ ಶೆಟ್ಟರ್ ಸ್ಫರ್ಧೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಹಿರಂಗ ಪತ್ರವನ್ನೂ ಬರೆದಿದ್ದರು.
ಆದರೆ ತಮ್ಮನ್ನು ವಿರೋಧಿಸಿದ ಎಲ್ಲರಿಗೂ ಸವಾಲೆಸೆಯುವ ದಾಟಿಯಲ್ಲಿ ಶೆಟ್ಟರ್ ಮಾತನಾಡಿದ್ದರು. 17 ಲಕ್ಷ ಮತದಾರರಿರುವಾಗ ಕೆಲವೇ ಕೆಲವರು ವಿರೋಧಿಸಿದರೇನು? ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿ ನಾಯಕರನ್ನು ಮತ್ತಷ್ಟು ಕೆರಳಿಸಿತ್ತು.
ಈ ಮಧ್ಯೆ ಸ್ಥಳೀಯ ವಿರೋಧವನ್ನು ಅನುಲಕ್ಷಿಸಿ ಶೆಟ್ಟರ್ ಬದಲು ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ವದಂತಿ ಹರಡಿತ್ತು. ಆದರೆ ಯಾವ ವಿರೋಧಕ್ಕೂ ಬಿಜೆಪಿ ವರಿಷ್ಠರು ಮಣೆ ಹಾಕಲಿಲ್ಲ. ಸ್ಥಳೀಯರನ್ನು ನಿರ್ಲಕ್ಷಿಸಿ ಶೆಟ್ಟರ್ ಅಭ್ಯರ್ಥಿ ಎಂದು ಅಂತಿಮವಾಗಿ ಘೋಷಣೆ ಮಾಡಿದೆ.
ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ