ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಜಗದೀಶ ಶೆಟ್ಟರ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಬಲ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸಾಲು ಹೊದೆಸಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು. “ಶೆಟ್ಟರ್ ಜನಸಂಘ, ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರಾದರೂ ಅವರು ಈವರೆಗೆ ಯಾವುದೇ ವಿವಾದಗಳಿಗೆ ಒಳಗಾಗದವರು. ಸೌಮ್ಯ, ಸಜ್ಜನರಾದ ಅವರು ಸುದೀರ್ಘ ಕಾಲ ನಮ್ಮೊಂದಿಗೆ ಇದ್ದವರು. ಅವರು ಆಡಳಿತದಲ್ಲಿದ್ದಾಗ ನಾವು ಪ್ರತಿಪಕ್ಷದಲ್ಲಿ, ಅವರು ಪ್ರತಿಪಕ್ಷದಲ್ಲಿದ್ದಾಗ ನಾವು ಆಡಳಿತದಲ್ಲಿದ್ದೆವು. ಆದರೂ ಯಾವಾಗಲೂ ನಮ್ಮೊಂದಿಗೆ ಜಗಳವಾಡಿಲ್ಲ” ಎಂದು ಕೊಂಡಾಡಿದರು.
ಜಗದೀಶ ಶೆಟ್ಟರ್ ಮಾತನಾಡಿ, “ನಾನು ಜನಸಂಘ ಕಾಲದಿಂದಲೂ ಪಕ್ಷವನ್ನು ಸಂಘಟನೆ ಮಾಡುತ್ತ ಬಂದವನು. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬೆಳೆಸಿದವನು. ಆರೆಸ್ಸೆಸ್, ಮುಖ್ಯವಾಗಿ ಎಬಿವಿಪಿಯಲ್ಲೂ ಕೆಲಸ ಮಾಡಿದವನು. ಬಿಎಸ್ ವೈ, ಅನಂತಕುಮಾರ್ ಮುಂತಾದವರೊಂದಿಗೆ ಕೆಲಸ ಮಾಡಿದವನು. ಆರು ಬಾರಿ ಹುಬ್ಬಳ್ಳಿ ಸೆಂಟ್ರಲ್ ನಿಂದ ಗೆದ್ದವನು. ನಾಮಪತ್ರ ಸಲ್ಲಿಕೆಗೆ ಕೆವೇ ದಿನ ಮೊದಲು ನನಗೆ ನೀವು ರಾಷ್ಟ್ರ ಮಟ್ಟದಲ್ಲಿ ಅಥವಾ ಪಕ್ಷದ ಬೇರೆ ಯಾವುದೇ ಜವಾಬ್ದಾರಿ ನಿರ್ವಹಿಸಿ, ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದಿದ್ದರೆ ಒಪ್ಪುತ್ತಿದ್ದೆ. ಆದರೆ ಕೊನೆಯ ಹಂತದಲ್ಲಿ ಮಕ್ಕಳಿಗೆ ಹೇಳಿದಂತೆ ಈ ಬಾರಿ ನಿಮಗೆ ಟಿಕೆಟ್ ನೀಡುವುದಿಲ್ಲ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಎಂದಾಗ ಮನಸ್ಸಿಗೆ ನೋವಾಯಿತು” ಎಂದು ತಮ್ಮ ಸೇರ್ಪಡೆ ಕಾರಣ ತಿಳಿಸಿದರು.
“ನಾನು ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ, ನಡ್ಡಾ ಅವರನ್ನು ದೂಷಿಸುವುದಿಲ್ಲ. ಈ ವಿಷಯಗಳು ಅವರಿಗೆ ಗೊತ್ತೇ ಇರಲಿಕ್ಕಿಲ್ಲ. ರಾಜ್ಯದ ಕೆಲವರು ತಮ್ಮಷ್ಟಕ್ಕೆ ಇಂಥ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾನು ಅಧಿಕಾರಕ್ಕಾಗಿ ಈ ನಿರ್ಧಾರ ತಳೆದಿಲ್ಲ. ಬದಲಿಗೆ ತೀವ್ರ ನೋವಾಗಿದೆ, ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವವಿದೆ. ಅವರ ನಂತರ ನಾನೇ ನಮ್ಮ ಸಮುದಾಯದ ಹಿರಿಯ ನಾಯಕನಾಗಿದ್ದು ನಾನೇನಾದರೂ ಅಧಿಕಾರ ಗಳಿಸಬಹುದೆಂಬ ಕಾರಣಕ್ಕೆ ನನಗೆ ಅವಮಾನ ಮಾಡಲಾಗಿದೆ” ಎಂದು ಖೇದ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶೆಟ್ಟರ್ ಅವರನ್ನು ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಇನ್ನಷ್ಟು ಪ್ರಬಲವಾಗಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “ಶೆಟ್ಟರ್ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತರಲ್ಲ. ನೇರ ನಿಷ್ಠುರ ವ್ಯಕ್ತಿತ್ವದವರು. ವೈಯಕ್ತಿಕ ಕೆಲಸಗಳಿಗಾಗಿ ಎಂದೂ ನನ್ನನ್ನು ಸಂಪರ್ಕಿಸಿದವರಲ್ಲ. ಕಾಂಗ್ರೆಸ್ ಸರಕಾರದ ವಿರುದ್ಧವೂ ಹೋರಾಟ ಮಾಡಿದ್ದರು. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಇನ್ನಷ್ಟು ಸಶಕ್ತವಾಗಿದೆ” ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ