
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಿಂದಾಗಿ ಶಿವಮೊಗ್ಗ ಮತ್ತೆ ಉದ್ವಿಗ್ನಗೊಂಡಿದ್ದು, ಪೊಲೀಸರು ಕಟ್ತೆಚ್ಚರ ವಹಿಸಿದ್ದಾರೆ.
ನಿನ್ನೆ ರಾತ್ರಿ ಮೆರವಣಿಗೆ ವೇಳೆ ಉದ್ರಿಕ್ತರ ಗುಂಪು ಸಿಕ್ಕ ಸಿಕ್ಕ ಕಡೆ, ಮನೆಗಳ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಲು ಆರಂಭಿಸಿದೆ. ಗಲಾಟೆಯಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಮನೆಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಘಟನೆಯಲ್ಲಿ ಪೊಲೀಸರು ಸೇರಿ 7 ಜನರು ಗಾಯಗೊಂಡಿದ್ದಾರೆ. ಸಧ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು 60ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.